

ಹುಣಸೂರು: ಇಂದಿನ ದಿನಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಲ್ಲಿಯೂ ಸೌಂದರ್ಯ ಪ್ರಜ್ಞೆ ಹೆಚ್ಚಾಗುತ್ತಿದ್ದು, ಮಹಿಳೆಯರು ಬ್ಯೂಟಿಷಿಯನ್ ಮತ್ತು ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳನ್ನು ವೃತ್ತಿಯನ್ನಾಗಿಸಿಕೊಳ್ಳುವತ್ತ ಆಸಕ್ತಿ ತೋರಬೇಕೆಂದು ನಗರದ ಟಿವಿಎಸ್ ಶೋರೂಂನ ವ್ಯವಸ್ಥಾಪಕಿ ಡಯಾನಾ ಜ್ಯೋತಿ ಬ್ರಿಟೋ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗನದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹುಣಸೂರು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 3 ತಿಂಗಳ ಬ್ಯೂಟಿಷಿಯನ್ ಮತ್ತು ಫ್ಯಾಷನ್ ಡಿಸೈನಿಂಗ್ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವ ಮನೋಭಾವ ಹೆಚ್ಚಾಗಿರುತ್ತದೆ. ಆದರೆ ಇದೀಗ ಪುರುಷರಲ್ಲಿಯೂ ಸೌಂದರ್ಯ ಕುರಿತಾದ ಆಸ್ತೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಸಹನೆ ಹೆಚ್ಚಾಗಿರುವ ಕಾರಣ ಗ್ರಾಹಕರ ಬೇಡಿಕೆಗೆ ತಕ್ಕಂತೆ ಫ್ಯಾಷನ್‌ಗಳನ್ನು ನೀಡಬಹುದಾಗಿದೆ. ನಿಮ್ಮ ಕೈಯಲ್ಲಿ ಕೌಶಲತೆ ಇದೆ ಎಂದರೆ ನೀವು ಆರ್ಥಿಕವಾಗಿ ಸಬಲರಾಗಬಲ್ಲಿರಿ ಮತ್ತು ನಿಮ್ಮ ಕುಟುಂಬಕ್ಕೆ ಆಧಾರವಾಗಬಲ್ಲಿರಿ ಎನ್ನುವುದನ್ನು ಅರಿತು ಯಾವುದಾದರೊಂದು ಕೌಶಲತೆಯನ್ನು ಕಲಿತುಕೊಳ್ಳಿರಿ ಎಂದರು.
ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಪಿ.ಡಿ.ನಾಯಕ್ ಮಾತನಾಡಿ, ಸಂಸ್ಥೆಯ ವತಿಯಿಂದ ವರ್ಷಕ್ಕೆ ಕನಿಷ್ಠ 100 ಮಹಿಳೆಯರಿಗೆ ವಿವಿಧ ಕೌಶಲ ತರಬೇತಿ ನೀಡಲಾಗುತ್ತಿದ್ದು, ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ತರಬೇತಿ ಪಡೆದ ಎಲ್ಲ ವಿದ್ಯಾರ್ಥಿನಿಯರಿಗೆ ಸಾಹಿತಿ ಡಾ.ರೇಣುಕಪ್ರಸಾದ್ ಪ್ರಮಾಣಪತ್ರ ವಿತರಿಸಿದರು.ಯೂತ್ ಮೂವ್ ಮೆಂಟ್‌ನ ರಾಜ, ಕೆ.ಚಂದ್ರೇಶ್, ಸಂಗೀತ, ಪಲ್ಲವಿ, ಗೀತ ಸೇರಿದಂತೆ ತರಬೇತಿ ಪಡೆದವರು ಹಾಜರಿದ್ದರು.