

ಚಿಕ್ಕಬಳ್ಳಾಪುರ : ಕರೊನೊ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್ ಸಂದರ್ಭದಲ್ಲಿ ಉತ್ತಮ ಬೆಲೆ ಇಲ್ಲದಿರುವುದಕ್ಕೆ ಹೂವಿನ ಗಿಡಗಳನ್ನು ಕಿತ್ತು ಹಾಕಿ, ರೈತರು ಬೆಂಕಿ ಹಚ್ಚುತ್ತಿದ್ದಾರೆ.
ತಾಲೂಕಿನ ನಂದಿ, ಮಂಡಿಕಲ್, ಮಂಚನಬಲೆ ಸುತ್ತಲಿನ ವಿವಿಧ ಭಾಗಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಹೂವಿನ ಗಿಡಗಳನ್ನು ಕಿತ್ತು ಹಾಕಲಾಗುತ್ತಿದೆ. ಬಳಿಕ ತೋಟದ ಜಮೀನಿನಲ್ಲಿ ಬೆಂಕಿ ಹಚ್ಚಿ, ಸುಟ್ಟು ಹಾಕುವ ಮೂಲಕ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಮದುವೆ ಸಭೆ ಸಮಾರಂಭಗಳು, ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿಲ್ಲ. ಸಾಂಕೇತಿಕ ಆಚರಣೆಗೆ ಸೀಮಿತವಾಗಿದೆ. ಬಹುತೇಕ ಆಲಯಗಳ ಬಾಗಿಲು ಮುಚ್ಚಿವೆ. ಇದರಿಂದ ಹೂವಿನ ಬೇಡಿಕೆ ಮತ್ತು ದರ ಕುಸಿದಿದೆ.
ಶೇ.20 ರಷ್ಟು ಹೂವು ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಅದು ನಿಕೃಷ್ಟ ಬೆಲೆ ಇದೆ. ಇದರಿಂದ ಸಾಗಾಣೆ ವೆಚ್ಚವು ಸಿಗುವುದಿಲ್ಲ. ಇದರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಹೂವುಗಳನ್ನು ರೈತರು ಮಾರುಕಟ್ಟೆಗೆ ತರುವುದು ಬಹುತೇಕ ಕಡಿಮೆಯಾಗುತ್ತಿದೆ. ಹಿಂದೆ ಕನಿಷ್ಠ 50 ರಿಂದ 90 ರೂಗಳಿಗೆ ಮಾರಾಟವಾಗುತ್ತಿದ್ದ ಮೇರಾಬುಲ್ ಗುಲಾಬಿ ಕೆ.ಜಿ 4 ರಿಂದ 5 ರೂಗಳಿಗೆ ಕುಸಿದಿದೆ. ಹೀಗೆ ಎಲ್ಲ ಹೂವುಗಳ ಬೆಲೆಯು ಸಮಾಧಾನಕರವಾಗಿಲ್ಲ. ತೋಟಗಳಲ್ಲಿ ಹೂವು ಬಾಡಿ ಹೋಗುತ್ತಿರುವುದನ್ನು ಅರಿತು ಗಿಡಗಳನ್ನು ಕಿತ್ತು ಹಾಕುತ್ತಿದ್ದಾರೆ.
ನಂದಿ ರೈತನ ಅಳಲು : 32 ಗುಂಟೆಯಲ್ಲಿ ಮೇರಾಬುಲ್ ಗುಲಾಬಿ ಬೆಳೆಯಲಾಗಿದೆ. ಆದರೆ, ಇದೀಗ ಬೆಲೆ ಇಲ್ಲ. ಹೂವುಗಳನ್ನು ಕೀಳಲು ಕೂಲಿ ಕಾರ್ಮಿಕರಿಗೆ ಕನಿಷ್ಠ 2 ರಿಂದ 3 ಸಾವಿರ ರೂ ಖರ್ಚು ಮಾಡಬೇಕು. ಆದರೆ, ಮಾರುಕಟ್ಟೆಗೆ ಮೂಟೆಗಳನ್ನು ತೆಗೆದುಕೊಂಡು ಹೋದರೆ 1 ಸಾವಿರ ಸಿಗುವುದಿಲ್ಲ. ಇನ್ನು ಗಿಡಗಳ ನಿರ್ವಹಣೆಗೆ 4 ರಿಂದ 7 ಸಾವಿರ ರೂ ಖರ್ಚು ಮಾಡಬೇಕು. ಇದಕ್ಕೆ ಗಿಡಗಳನ್ನು ಕಿತ್ತು ಬೆಂಕಿ ಹಾಕಲಾಗುತ್ತದೆ. ಬುಡಗಳನ್ನು ಹಾಗೆಯೇ ಬಿಟ್ಟಿರುವುದರಿಂದ ಇನ್ನೂ ಮೂರು ತಿಂಗಳಲ್ಲಿ ಗಿಡಗಳು ಬೆಳೆದು, ಹೂವು ಬಿಡುತ್ತದೆ. ಆಗಲಾದರೂ ಒಳ್ಳೆಯ ಬೆಲೆಯ ಸಿಗುತ್ತದೆಯೋ ನೋಡಬೇಕು ಎನ್ನುವುದು ಹೂವು ಬೆಳೆಗಾರ ನಂದಿಯ ಚಿಕ್ಕಣ್ಣ ಮಾತು.
ಕೋಟ್ )))))))) ಈಗಂತೂ ಮಾರುಕಟ್ಟೆಯಲ್ಲಿ ರೈತರಿಂದ ಹೂವುಗಳನ್ನು ಖರೀದಿಸುವವರೇ ಇಲ್ಲ. ಹೂವುಗಳನ್ನು ಬೆಳೆದು ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಮಂಜುನಾಥ್, ಹೂವು ಬೆಳೆಗಾರ