

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ಸಜ್ಜಾಗುತ್ತಿರುವ ಬೆಂಗಳೂರಿನಲ್ಲಿ ಹೂವು, ಬೂದುಗುಂಬಳದ ಬೆಲೆ ನಿಧಾನವಾಗಿ ಏರುತ್ತಿದೆ. ಹಬ್ಬಗಳ ದಿನ ದರ ಏರಿಕೆ ಬಿಸಿಯಿಂದ ಪಾರಾಗುವುದಕ್ಕಾಗಿ ಎರಡು ದಿನ ಮೊದಲೇ ಜನರು ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟು ಖರೀದಿ ಆರಂಭಿಸಿದ್ದಾರೆ. ಶುಕ್ರವಾರ ಆಯುಧಪೂಜೆ ಹಾಗೂ ಶನಿವಾರ ವಿಜಯದಶಮಿ ಹಾಗೂ ಭಾನುವಾರ ಎಂದಿನಂತೆ ರಜೆ ಇರಲಿದೆ. 3 ದಿನ ಒಟ್ಟಿಗೆ ರಜೆ ಬಂದಿರುವುದರಿಂದ ಸರ್ಕಾರಿ ಕಚೇರಿ, ಖಾಸಗಿ ಕಂಪನಿ, ಕಾಲೇಜುಗಳು, ಗೋದಾಮು, ಫ್ಯಾಕ್ಟರಿಗಳಲ್ಲಿ ಗುರುವಾರವೇ ಆಯುಧ ಪೂಜೆ ನಡೆಯಲಿದೆ. ಹೀಗಾಗಿ ಬುಧವಾರವೇ ಜನರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ಲಗ್ಗೆ ಇಟ್ಟಿದ್ದರು. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿ ಅನೇಕ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ.
ಬೂದುಗುಂಬಳ ಡಿಮಾಂಡ್: ಆಯುಧಪೂಜೆಯಲ್ಲಿ ಬೂದುಗುಂಬಳವೇ ಪ್ರಧಾನ. ಅಂಗಡಿ, ಮನೆ, ವಾಹನ, ಕಚೇರಿ, ಕಾರ್ಖಾನೆಗಳಲ್ಲಿನ ಯಂತ್ರೋಪಕರಣಗಳು ಸೇರಿ ಎಲ್ಲ ವಸ್ತುಗಳಿಗೂ ಪೂಜೆ ಸಲ್ಲಿಸಿದ ಬಳಿಕ ಬೂದುಗುಂಬಳ ಒಡೆಯಲಾಗುತ್ತದೆ. ಈ ಬಾರಿಯೂ ಎಂದಿನಂತೆ ತಮಿಳುನಾಡು ಮತ್ತು ಆಂಧ್ರದಿಂದ ಟನ್ ಗಟ್ಟಲೆ ಬೂದುಗುಂಬಳ ಮಾರುಕಟ್ಟೆ ತಲುಪಿವೆ. ನಿರಂತರ ಮಳೆಯಿಂದ ಬೆಳೆಗೆ ಹಾನಿಯಾಗಿರುವುದರಿಂದ ದರ ಏರಿಕೆ ಆಗಿದೆ. ಸಗಟು ದರದಲ್ಲಿ ಕೆ.ಜಿ.ಗೆ 30-35 ರೂ. ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆ.ಜಿ. ಬೆಲೆ 40 ರೂ. ಇದೆ. ಚಿಲ್ಲರೆ ವ್ಯಾಪಾರದಲ್ಲಿ ಕೆಲವರು ಕೆ.ಜಿ.ಗೆ ಬದಲಾಗಿ ಕಾಯಿಯ ಗಾತ್ರದ ಮೇಲೆ ಚಿಕ್ಕ ಕಾಯಿಗೆ 100-150 ರೂ., ದೊಡ್ಡ ಕಾಯಿಗೆ 200-250 ರೂ. ವರೆಗೂ ಮಾರಾಟ ಮಾಡುತ್ತಿದ್ದಾರೆ. ಹಬ್ಬದ ದಿನ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಆಯುಧಪೂಜೆಯಲ್ಲಿ ಸಿಹಿ ವಿತರಿಸುವುದು ವಾಡಿಕೆಯಾಗಿದೆ. ಹೀಗಾಗಿ ನಗರದೆಲ್ಲೆಡೆ ಸ್ವೀಟ್ಸ್ ಸ್ಟಾಲ್, ಬೇಕರಿಗಳ ಮುಂದೆ ಜನರು ಸಾಲುಗಟ್ಟಿ ಸಿಹಿ ತಿನಿಸು ಖರೀದಿಸುತ್ತಿದ್ದಾರೆ.
ಕಡ್ಲೆಪುರಿಗೆ ಹೆಚ್ಚು ಬೇಡಿಕೆ: ಆಯುಧಪೂಜೆ ಹಾಗೂ ವಿಜಯದಶಮಿ ದಿನ ಪೂಜೆ ನೆರವೇರಿಸಿದ ಬಳಿಕ ಹಣ್ಣು ಮತ್ತು ಸಿಹಿಯೊಂದಿಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಬೆಂಗಳೂರಿನಲ್ಲಿ ಕಡ್ಲೆಪುರಿಗೆ ಬೇಡಿಕೆ ಹೆಚ್ಚಿದೆ. ಒಂದು ಸೇರಿಗೆ 10-15 ರೂ.ವರೆಗೆ ಮಾರಾಟವಾಗುತ್ತಿದೆ.
ತರಕಾರಿ ದರವೂ ತುಟ್ಟಿ: ಹಬ್ಬದ ಹಿನ್ನೆಲೆಯಲ್ಲಿ ತರಕಾರಿ ದರವೂ ಏರಿಕೆ ಕಂಡಿದೆ. ಬುಧವಾರ ಹಾಪ್ಕಾಮ್್ಸ ದರದಲ್ಲಿ ಬಟಾಣಿ ಕೆ.ಜಿ.ಗೆ 250 ರೂ., ಶುಂಠಿ 200 ರೂ., ಬೀನ್ಸ್ 110-135 ರೂ., ಗೋರಿಕಾಯಿ 80 ರೂ., ಹಸಿ ಮೆಣಸಿನಕಾಯಿ 72 ರೂ., ಬೆಂಡೆಕಾಯಿ 68 ರೂ., ದಪ್ಪ ಮೆಣಸಿನಕಾಯಿ 66 ರೂ., ಟೊಮ್ಯಾಟೊ 66 ರೂ., ಕ್ಯಾರೆಟ್ 66 ರೂ., ಆಲೂಗೆಡ್ಡೆ 64 ರೂ., ಹೂಕೋಸು 60 ರೂ., ಹೀರೇಕಾಯಿ 52ರೂ., ಬದನೆಕಾಯಿ -ಠಿ;42., ತಲುಪಿದೆ.
ಮಳೆಯಿಂದ ಹೂವಿಗೆ ಹಾನಿ: ಮಳೆ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದೆ. ಬುಧವಾರ ಕೆ.ಆರ್. ಮಾರುಟಕ್ಟೆಯಲ್ಲಿ ಸೇವಂತಿಗೆ ಹೂವು ಕೆ.ಜಿ.ಗೆ 100-300 ರೂ., ಚೆಂಡು ಹೂವು ಕೆ.ಜಿ.ಗೆ 60 ರಿಂದ 80 ರೂ. ಕನಕಾಂಬರಿ 600 ರೂ., ಕಾಕಡ 600, ಮಲ್ಲಿಗೆ ಮೊಗ್ಗು 500 ರೂ., ಸುಗಂಧರಾಜ ಕೆ.ಜಿ. 400 ರೂ.ಗೆ ಮಾರಾಟವಾಯಿತು. ಪಾಲಿ ಹೌಸ್ಗಳಲ್ಲಿ ಬೆಳೆದ ಸೇವಂತಿಗೆ, ಚೆಂಡು ಹೂವುಗೆ ಬೇಡಿಕೆ ಹೆಚ್ಚಿದೆ.