ಕೃಷ್ಣೆ ಅಬ್ಬರ ಉತ್ತರ ತತ್ತರ ಕಾವೇರಿ ಕಣಿವೆಯಲ್ಲೂ ನೆರೆ

ವಿಜಯವಾಣಿ (2)
Published on

ಘಟಪ್ರಭೆ ಅಬ್ಬರಕ್ಕೆ ಬೆಳಗಾವಿಯ ಮಸಗುಪ್ಪಿ ಗ್ರಾಮ ಜಲಾವೃತ | ಹಂಪಿಯ ಸ್ಮಾರಕಗಳನ್ನು ಆವರಿಸಿದ ನೀರು

ಬೆಂಗಳೂರು: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರ ಜತೆಗೆ ಬೆಳಗಾವಿ ಜಿಲ್ಲೆಯಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಪರಿಣಾಮ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದ್ದು, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ.

ಘಟಪ್ರಭಾ ನದಿಯ ಪ್ರವಾಹಕ್ಕೆ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮ ಜಲಾವೃತವಾಗಿದ್ದು, 150 ಮನೆಗಳಿಗೆ ನೀರು ನುಗ್ಗಿದೆ. ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಕೃಷಿ ಜಮೀನಿಗೆ ನುಗ್ಗಿ ಹಾನಿ ಸಂಭವಿಸಿದೆ. ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರೇಶ್ವರ ದೇವಸ್ಥಾನ ಜಲಾವೃತವಾಗಿದ್ದು, ದೇವರನ್ನು ಕಾಡಸಿದ್ದೇಶ್ವರ ಮಠಕ್ಕೆ ಸ್ಥಳಾಂತರಿಸಲಾಗಿದೆ. ರಾಯಚೂರು ಜಿಲ್ಲೆ ಬಸವಸಾಗರ ಜಲಾಶಯದಿಂದ ನದಿಗೆ ಹೆಚ್ಚುವರಿಯಾಗಿ ನೀರು ಹರಿಸಿದ್ದರಿಂದ ದೇವದುರ್ಗ ತಾಲೂಕಿನ ಲಿಂಗದಹಳ್ಳಿ, ಬಾಗೂರು, ಅಂಜಳ, ಗೋಪಳಾಪುರ, ಹೂವಿನಹೆಡಗಿ, ಕೊಪ್ಪರ, ಹೇರೂರು ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯದಿಂದ ಅಪಾರ ನೀರನ್ನು ನದಿಗೆ ಹರಿಬಿಡಲಾಗಿದ್ದು, ವಿಶ್ವವಿಖ್ಯಾತ ಹಂಪಿಯ ಪ್ರಮುಖ ಸ್ಮಾರಕಗಳನ್ನು ನೀರು ಆವರಿಸಿದೆ.

ಶ್ರೀರಂಗಪಟ್ಟಣ ಸುತ್ತವರಿದ ಕಾವೇರಿ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕನ್ನಂಬಾಡಿ ಅಣೆಕಟ್ಟೆಯಿಂದ ಜೀವನದಿ ಕಾವೇರಿಗೆ 1.30 ಲಕ್ಷ ಕ್ಯೂಸೆಕ್ ನೀರು ಹರಿಸಿದ ಹಿನ್ನೆಲೆಯಲ್ಲಿ ಪ್ರವಾಹ ಉಂಟಾಗಿದೆ. ಜಲಾಶಯದ ತಗ್ಗು ಪ್ರದೇಶ ಹಾಗೂ ನದಿ ಪಾತ್ರಗಳ ತೀರದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದೆ. ಕೆ.ಆರ್.ಸಾಗರದಲ್ಲಿರುವ ಅಣೆಕಟ್ಟೆಗೆ ಕೊಡಗು ಹಾಗೂ ವಯನಾಡು ಸೇರಿ ಕಾವೇರಿ ಜಲಾನಯನ ಪ್ರದೇಶದ ಮೇಲ್ಮೈ ಭಾಗದಲ್ಲಿ ಹೆಚ್ಚು ಮಳೆ ಸುರಿದ ಹಿನ್ನೆಲೆ ಹಾಸನದ ಹೇಮಾವತಿ ಮತ್ತು ಹಾರಂಗಿ ಜಲಾಶಯಗಳು ಭರ್ತಿಯಾಗಿ ನೀರು ಬಿಡುಗಡೆ ಮಾಡಿರುವುದರಿಂದ 1.15 ಲಕ್ಷ ಕ್ಯೂಸೆಕ್​ಗೂ ಅಧಿಕ ಒಳಹರಿವು ಇದೆ. ಬೆಳಗೊಳದ ಎಡಮುರಿ-ಬಲಮುರಿ, ಕಾರೆಕುರ ಸಂರಕ್ಷಿತ ಅರಣ್ಯ ಪ್ರದೇಶ ಸೇರಿ ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಜಲಾವೃತವಾಗಿದೆ. ನದಿ ತೀರದ ಗ್ರಾಮಗಳ ಕೆಲ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಕೊಂಚ ಸಮಸ್ಯೆಯಾಗಿದೆ. ಶ್ರೀರಂಗಪಟ್ಟಣ ಬಲಮುರಿ, ಎಡಮುರಿ, ಶತಮಾನದ ಬಂಗಾರದೊಡ್ಡಿ ಅಣೆಕಟ್ಟೆ, ಕಾವೇರಿ ಮೈದುಂಬಿ ಹರಿಯುವ ಚಿತ್ರಣವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಶಿರೂರ ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ!

ಕಾರವಾರ ಸಮೀಪದ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಗಂಗಾವಳಿ ನದಿಯಲ್ಲಿ ನಾಪತ್ತೆ ಯಾದ ಟ್ರಕ್, ಮೂವರ ಜೀವಗಳಿಗಾಗಿ ನಡೆದಿದ್ದ ಶೋಧ ಕಾರ್ಯಾಚರಣೆಯನ್ನು ನದಿಯ ಹರಿವು ವೇಗವಾಗಿರುವುದರಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ನಾಪತ್ತೆ ಆಗಿರುವ ಕೇರಳದ ಲಾರಿ ಚಾಲಕ ನನ್ನು ಆದಷ್ಟು ಶೀಘ್ರ ಪತ್ತೆ ಮಾಡಲು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.

ಐದು ದಿನ ರೈಲು ಸಂಪರ್ಕ ಅನುಮಾನ

ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಳಿ ದುರಸ್ತಿ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಐದು ದಿನ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ. ಶನಿವಾರವೂ ಹಾಸನ-ಶಾಂತಿಗ್ರಾಮ ನಡುವೆ ಅಲ್ಪ ಮಣ್ಣುಕುಸಿತ ಸಂಭವಿಸಿತ್ತು. ಇದರಿಂದ ಗೂಡ್ಸ್ ರೈಲು ತೊಂದರೆಗೆ ಸಿಲುಕಿತ್ತು. ಆದರೆ ಯಾವುದೇ ಹಾನಿಯಾಗಿಲ್ಲ.

ಮೈದುಂಬುತ್ತಿದೆ ಹೊಗೇನಕಲ್ ಫಾಲ್ಸ್

ಕಬಿನಿ ಹಾಗೂ ಕೆಆರ್​ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ಹೊಗೇನಕಲ್ ಫಾಲ್ಸ್ ಮೈದುಂಬುತ್ತಿದೆ. ಕಬಿನಿ ಹಾಗೂ ಕೆಆರ್​ಎಸ್ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್​ಗಿಂತಲೂ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೇ ಹಂಪಾಪುರ, ಯಡಕುರಿಯ ಹಾಗೂ ಈ ಭಾಗದಲ್ಲಿ ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲಾಡಳಿತ ಜನ, ಜಾನುವಾರುಗಳ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ದಕ್ಷಿಣ ಭಾರತದ ನಯಾಗರ ಎಂದೇ ಪ್ರಸಿದ್ಧಿ ಪಡೆದಿರುವ ಹೊಗೇನಕಲ್ ಫಾಲ್ಸ್ ಸುಮಾರು 72 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದೆ.

ಕರಾವಳಿಯಲ್ಲಿ ಮಳೆ ತುಸು ವಿರಾಮ

ಕರಾವಳಿಯಲ್ಲಿ ಭಾನುವಾರ ಮಳೆ ತುಸು ವಿರಾಮ ಪಡೆದಿದೆ. ಹವಾಮಾನ ಇಲಾಖೆ ಜುಲೈ 29ರಂದು ಯೆಲ್ಲೊ ಅಲರ್ಟ್ ಘೊಷಿಸಿದೆ. ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 22 ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ನದಿ ನೀರಲ್ಲಿ ಮುಳುಗಿ ಬಾಲಕಿ ಸಾವು

ಕೃಷ್ಣಾ ನದಿ ಅಪಾಯಮಟ್ಟದಲ್ಲಿ ಉಕ್ಕಿ ಹರಿಯಲು ಆರಂಭಿಸುತ್ತಿದ್ದಂತೆ ಸಾವು-ನೋವು ಸಂಭವಿಸುತ್ತಿವೆ. ಜು.26 ರ ಸಂಜೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಳಿ ಪ್ರವಾಹದ ನೀರಲ್ಲೇ ನಡೆದುಕೊಂಡು ಮೇವು ತರಲು ಜಮೀನಿಗೆ ಹೋಗಿದ್ದ ರೈತ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮತ್ತೊಂದೆಡೆ ಕೃಷ್ಣಾ ನದಿ ಪ್ರವಾಹದ ನೀರಿಗೆ ಸಿಲುಕಿ ಬಾಲಕಿಯೊಬ್ಬಳು ಭಾನುವಾರ ಸಾವಿಗೀಡಾಗಿದ್ದಾಳೆ. ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ವರ್ಷದ ಬಾಲಕಿ ಸಮೃದ್ಧಿ ತಿಮ್ಮಕ್ಕನವರ (4)ಮೃತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net