

ಶತಮಾನದ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ಇದುವರೆಗೆ ಸುಮಾರು 1,200 ಜನರು ಬಲಿಯಾಗಿದ್ದಾರೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿನ ಹಿಮನದಿಯ ಕರಗುವಿಕೆಯೂ ಪ್ರವಾಹ ಸ್ಥಿತಿ ಹದಗೆಟ್ಟು ಸಂಕಟ ಹೆಚ್ಚಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಜಾಗತಿಕ ತಾಪಮಾನ ತೀಕ್ಷ್ಣಗೊಳ್ಳುತ್ತಿರುವುದರಿಂದ ವಿಜ್ಞಾನಿಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಹಿಮಾಲಯದ ಹಿಮಬಂಡೆಗಳು ಕರಗುತ್ತಿರುವುದು ಪ್ರವಾಹ ಪರಿಸ್ಥಿತಿ ಉಲ್ಬಣಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಭಾರತೀಯ ವಿಜ್ಞಾನಿಗಳ ವಾರ್ಷಿಕ ಚಾರಣ: ಪ್ರತಿ ವರ್ಷ ತಾಪಮಾನ ಹೆಚ್ಚುತ್ತಿದ್ದಂತೆ ಭಾರತೀಯ ವಿಜ್ಞಾನಿಗಳು ತಂಡೋಪತಂಡವಾಗಿ ಹಿಮಾಲಯದ ಪರ್ವತಗಳಿಗೆ ಚಾರಣ ಹೋಗುತ್ತಾರೆ. ಹಿಮಾಚಲ ಪ್ರದೇಶದ ಛೋಟಾ ಶಿಗ್ರಿ ಹಿಮನದಿ (ಗ್ಲೇಸಿಯರ್) ಅಧ್ಯಯನ ಈ ಚಾರಣದ ಉದ್ದೇಶವಾಗಿರುತ್ತದೆ. ಕಳೆದ ಒಂದೂವರೆ ದಶಕದಲ್ಲಿ ಗ್ಲೇಸಿಯರ್ನ ಹಿಮಾಚ್ಛಾದನೆ, ಗಾಳಿ ಮತ್ತು ಮಣ್ಣಿನ ಉಷ್ಣಾಂಶ, ಹಿಮ ರೂಪುಗೊಳ್ಳುವಿಕೆಯ ಮೇಲ್ಪದರದ ವೀಕ್ಷಣೆ ಮತ್ತು ಋತುಮಾನಕ್ಕೆ ತಕ್ಕಂತೆ ಹಿಮಕರಗಿ ಕೆಳ ಭಾಗದ ಕಣಿವೆ ನದಿಗಳಿಗೆ ನೀರು ಬಿಡುಗಡೆಯಾಗುವ ಪ್ರಕ್ರಿಯೆಗಳನ್ನು ಅವರು ಅಧ್ಯಯನ ಮಾಡಿದ್ದಾರೆ.
ಕೊಚ್ಚಿಹೋದ ಕೇಂದ್ರ: ಈ ವರ್ಷ ದಾಖಲೆ ಪ್ರಮಾಣದ ಗ್ಲೇಸಿಯರ್ ಕರಗುವಿಕೆಯಿಂದಾಗಿ, ಬಿಡುಗಡೆಯಾಗುವ ನೀರನ್ನು ಅಳೆಯುವ ಕೇಂದ್ರವೇ ಕೊಚ್ಚಿ ಹೋಗಿದೆ. ‘ನಾವು ಜೂನ್ನಲ್ಲಿ ಆ ಕೇಂದ್ರವನ್ನು ಸ್ಥಾಪಿಸಿದ್ದೆವು. ಆಗಸ್ಟ್ನಲ್ಲಿ ಅದರ ಕುರುಹೇ ಕಾಣಿಸಲಿಲ್ಲ’ ಎಂದು ಇಂದೋರ್ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಹಿಮನದಿತಜ್ಞ ಮಹಮದ್ ಫರೂಕ್ ಅಝುಂ ಹೇಳಿದ್ದಾರೆ. ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ತಾಪಮಾನವು 100 ವರ್ಷಗಳ ದಾಖಲೆ ಮುರಿದಿದ್ದು ತೀವ್ರ ಬಿಸಿಗಾಳಿ ಅಪ್ಪಳಿಸಿತ್ತು. ಅದರ ಪರಿಣಾಮವಾಗಿ ನೀರ್ಗಲ್ಲು ಕರಗಿತ್ತು. ಕಳೆದ ವಾರ ನೀಡಿದ ಭೇಟಿ ವೇಳೆ ದಾಖಲೆ ಪ್ರಮಾಣದಲ್ಲಿ ಹಿಮ ಕರಗುವಿಕೆಯನ್ನು ಗಮನಿಸಿದೆವು ಎಂದೂ ಅಝುಂ ವಿವರಿಸಿದ್ದಾರೆ. ಈ ವರ್ಷ ಭೂಗ್ರಹವನ್ನು ಅಪ್ಪಳಿಸಿದ ಉಷ್ಣ ಮಾರುತದಿಂದ ಯುರೋಪ್ನ ಆಲ್ಪ್ ್ಸ ಪರ್ವತಾವಳಿ ಮಾತ್ರವಲ್ಲದೆ ಹಿಮಾಲಯ ಪರ್ವತಶ್ರೇಣಿಯಲ್ಲಿಯೂ ಅಗಾಧ ಪ್ರಮಾಣದಲ್ಲಿ ಹಿಮ ಕರಗಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿ ಹಿಮ ಕರಗುವಿಕೆ ಪಾಕಿಸ್ತಾನದಲ್ಲಿ ಹೆಚ್ಚಿನ ದುಷ್ಪರಿಣಾಮ ಬೀರಿದೆ. ಪ್ರವಾಹದ ನೀರಿನಿಂದ ಕೃಷಿ ಜಮೀನುಗಳು ಮತ್ತು ನಗರಗಳು ಮುಳುಗಡೆಯಾಗಿವೆ. ಜೂನ್ನಿಂದೀಚೆಗೆ ಸಂಭವಿಸಿರುವ ಜಲಪ್ರಳಯದಿಂದ 3 ಕೋಟಿಗೂ ಹೆಚ್ಚು ಜನರು ಸಂತ್ರಸ್ತರಾಗಿದ್ದು 1,200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಆಗಸ್ಟ್ನಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ಗಡಿ ಭಾಗದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಪತನಗೊಂಡು ಆರು ಮಿಲಿಟರಿ ಅಧಿಕಾರಿಗಳು ಮೃತಪಟ್ಟಿದ್ದರು.
ತುರ್ತು ಪರಿಸ್ಥಿತಿ ಘೋಷಣೆ: ದೇಶವನ್ನು ಕಾಡುತ್ತಿರುವ ವಿಪತ್ಕಾರಿ ಪ್ರವಾಹವನ್ನು ‘ರಾಷ್ಟ್ರೀಯ ತುರ್ತಪರಿಸ್ಥಿತಿ’ ಎಂದು ಪಾಕ್ ಸರ್ಕಾರ ಘೋಷಿಸಿದೆ. ಜೂನ್ನಿಂದೀಚೆಗೆ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ದೇಶದ ಬಹುತೇಕ ಭಾಗ ತತ್ತರಿಸಿದೆ. ನೈಋತ್ಯ ಪ್ರಾಂತ್ಯ ಬಲೂಚಿಸ್ತಾನದ ಬಹುಭಾಗಗಳು ಇನ್ನೂ ನೀರಿನಲ್ಲಿ ಮುಳುಗಿದ್ದು 2010ರ ವಿನಾಶಕಾರಿ ಪ್ರವಾಹವನ್ನು ನೆನಪಿಸುವಂತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಅಧಿಕಾರಿಗಳು ಹೇಳಿದ್ದಾರೆ. ಮೃತರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಬಲೂಚಿಸ್ತಾನ (234) ಮತ್ತು ದಕ್ಷಿಣದ ಸಿಂಧ್ (306) ಪ್ರಾಂತ್ಯಕ್ಕೆ ಸೇರಿದವರು. ಕುಂಭದ್ರೋಣ ಮಳೆಗೆ ದೇಶದಾದ್ಯಂತ 5 ಲಕ್ಷಕ್ಕೂ ಹೆಚ್ಚು ಮನೆಗಳು ಹಾಳಾಗಿವೆ. ಮಕ್ಕಳು ಆದಿಯಾಗಿ ಬಂಧು-ಬಾಂಧವರು ಕಣ್ಣ ಮುಂದೆಯೇ ಪ್ರವಾಹದ ನೀರಿಗೆ ಕೊಚ್ಚಿ ಹೋಗುತ್ತಿರುವುದನ್ನು ಕಂಡು ಜನರು ರೋದಿಸುತ್ತಿರುವ ದೃಶ್ಯ ಮನಕರಗಿಸುವಂತಿವೆ.
ಬಿಸಿಗಾಳಿ ಅಬ್ಬರ: ಪಾಕಿಸ್ತಾನದ ಬಹಳಷ್ಟು ಭಾಗಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಷಿಯಸ್ಗಿಂತ ಜಾಸ್ತಿಯಾಗಿದ್ದು ಬಿಸಿಗಾಳಿಯ ಅಬ್ಬರಕ್ಕೆ ಕಾರಣವಾಗಿತ್ತು. ಜನರು ಸೆಕೆಯಿಂದ ನಲುಗಿದ್ದರು. ಆ ಅವಧಿಯಲ್ಲಿ ಮೇ ತಿಂಗಳ ಒಂದು ದಿನ ಜಾಕೋಬಾಬಾದ್ನಲ್ಲಿ ತಾಪಮಾನ 51 ಡಿಗ್ರಿ ಸೆಲ್ಸಿಯಸ್ ಆಗಿತ್ತು. ‘ಇವು ಸಾಮಾನ್ಯ ಉಷ್ಣ ಮಾರುತಗಳಲ್ಲ. ಅವು ಜಗತ್ತಿನಲ್ಲೇ ಅತ್ಯಂತ ಕೆಟ್ಟ ಉಷ್ಣ ಮಾರುತಗಳಾಗಿವೆ. ಭೂಮಿಯ ಮೇಲಿನ ಅತಿ ಬಿಸಿ ಜಾಗ ಪಾಕಿಸ್ತಾನದಲ್ಲಿತ್ತು’ ಎಂದು ಪಾಕ್ನತಾಪಮಾನ ಬದಲಾವಣೆ ಖಾತೆ ಮಾಜಿ ಸಚಿವ ಮಲಿಕ್ ಅಮೀನ್ ಅಸ್ಲಾಂ ಹೇಳಿದ್ದಾರೆ.
ಸರೋವರ ಸೃಷ್ಟಿ: ಮುಂಗಾರು ಮಾರುತದ ಅಬ್ಬರ ಹಾಗೂ ಹಿಮನದಿಯ ಕರಗುವಿಕೆಯಿಂದ ಎಲ್ಲೆಲ್ಲೂ ಜಲಮಯವಾಗಿರುವ ಪಾಕಿಸ್ತಾನದಲ್ಲಿ 100 ಕಿಮೀ ಗಾತ್ರದಷ್ಟು ಬೃಹತ್ ಸರೋವರವೊಂದು ಸೃಷ್ಟಿಯಾಗಿರುವುದು ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ. ನಾಸಾದ ಉಪಗ್ರಹ ಚಿತ್ರಗಳು ಪಾಕ್ನ ವಿನಾಶಕಾರಿ ಪ್ರವಾಹದ ಅಗಾಧತೆಯನ್ನು ತೋರಿಸುವುದರೊಂದಿಗೆ ಅನಾಹುತದ ವಿವರಗಳನ್ನು ಎತ್ತಿತೋರಿಸುತ್ತವೆ. ಸಿಂಧು ನದಿ ಅಪಾರ ವೇಗದಲ್ಲಿ ಹರಿಯುತ್ತಿದ್ದು ಅದರ ಪರಿಣಾಮವಾಗಿ ನೂರು ಕಿಲೋಮೀಟರ್ ವ್ಯಾಪ್ತಿಯ ಒಳನಾಡು ಪ್ರದೇಶ ಸರೋವರವಾಗಿ ಪರಿವರ್ತನೆಗೊಂಡಿದೆ ಎಂಬುದು ಚಿತ್ರಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ. ಈ ಶತಮಾನದ ಅತಿ ಭೀಕರವಾದ ಈ ಜಲಪ್ರಳಯವನ್ನು ‘ಮಾನ್ಸೂನ್ ಆನ್ ಸ್ಟಿರಾಯಿಡ್ಸ್’ ಎಂದು ವಿಶ್ವಸಂಸ್ಥೆ ಅಧಿಕಾರಿಗಳೇ ವರ್ಣಿಸಿದ್ದಾರೆ. ನಾಸಾದ ಮೋಡೀಸ್ ಉಪಗ್ರಹ ಸೆನ್ಸರ್ ಈ ಹೊಸ ಚಿತ್ರಗಳನ್ನು ತೆಗೆದಿದೆ. ಪಾಕಿಸ್ತಾನದ ಮೂರನೇ ಒಂದರಷ್ಟು ಭಾಗ ಜಲಾವೃತಗೊಂಡಿರುವುದನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಉಪಗ್ರಹ ಚಿತ್ರಗಳು ಕೂಡ ದೃಢಪಡಿಸಿವೆ.