ಶಿವಮೊಗ್ಗ ಜಿಲ್ಲೆಯ ತಗ್ಗು ಪದೇಶಗಳಲ್ಲಿ ಜಲಾವೃತ ಭಯ

rain
ಶಿವಮೊಗ್ಗದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿ.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಅನಾವೃಷ್ಟಿ ಬಳಿಕ ಈಗ ಅತಿವೃಷ್ಟಿ ಭಯ ಕಾಡುತ್ತಿದೆ. ಜಲಾಶಯಗಳೆಲ್ಲವೂ ಭರ್ತಿ ಆಗಿದ್ದು, ಜಲಾಶಯದ ಕೆಳಭಾಗ ಮಾತ್ರವಲ್ಲದೇ ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗುವ ಅಪಾಯ ಎದುರಾಗಿದೆ. ಜುಲೈ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 603 ಮಿ.ಮೀ.. ಈ ಬಾರಿ ಬಿದ್ದಿರುವ ಮಳೆ ಒಂದು ಸಾವಿರ ಮಿ.ಮೀ.ಗೂ ಅಧಿಕ. ಇದು ಮುಂದಿನ ದಿನಗಳಲ್ಲಿ ಸೃಷ್ಟಿಯಾಗುವ ಸನ್ನಿವೇಶಕ್ಕೆ ಮುನ್ನೆಚ್ಚರಿಕೆಯಾಗಿದೆ.

ಭದ್ರಾ ಜಲಾಶಯದಿಂದ 41,957 ಕ್ಯೂಸೆಕ್ ನೀರು ಹೊರಬಿಡುತ್ತಿರುವ ಪರಿಣಾಮ ಭದ್ರಾವತಿ ಹಾಗೂ ಹೊಳೆಹೊನ್ನೂರಿನಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾವತಿಯ ಹೊಸ ಸೇತುವೆಗೆ ಮತ್ತೆ ಕಂಟಕ ಎದುರಾಗಿದೆ. ಹೊಳೆಹೊನ್ನೂರಿನ ಎಡಿ ಕಾಲನಿ ಹಾಗೂ ವಡೇರಪುರದಲ್ಲಿ ಕೆಲ ಮನೆಗಳಿಗೆ ಮಂಗಳವಾರ ತಡರಾತ್ರಿ ತುಂಗಭದ್ರಾ ನದಿ ನೀರು ನುಗ್ಗಿತ್ತು. ಇಲ್ಲಿ ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ.
ಶಿವಮೊಗ್ಗ ನಗರದಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯ ಕಾಡುತ್ತಿದೆ. ಶಾಂತಮ್ಮ ಲೇಔಟ್, ವಿದ್ಯಾನಗರ 13 ಹಾಗೂ 14ನೇ ಕ್ರಾಸ್, ಆರ್‌ಟಿ ನಗರ, ಮಂಡಕ್ಕಿ ಬಟ್ಟಿ ಬಡಾವಣೆಗಳಲ್ಲಿ ನಗರ ಪಾಲಿಕೆಯಿಂದ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗಿದೆ. ಮಂಡಕ್ಕಿ ಬಟ್ಟಿ ಭಾಗದಲ್ಲಿ ಕೆಲ ಮನೆಗಳಿಗೆ ಮಂಗಳವಾರ ರಾತ್ರಿ ನೀರು ನುಗ್ಗಿತ್ತು.
ತುಂಗಾ ಜಲಾಶಯದಿಂದ ಈಗಾಗಲೇ 74,495 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಅದೇ ವೇಳೆ ಶಿವಮೊಗ್ಗ ನಗರದಲ್ಲೂ ವ್ಯಾಪಕ ಮಳೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಉಕ್ಕಿ ಹರಿಯುತ್ತಿರುವ ನದಿ ನೀರು ಸಂಪರ್ಕದ ಎಲ್ಲ ಕಾಲುವೆಗಳಲ್ಲೂ ಆವರಿಸಿಕೊಂಡಿದೆ. ಶಿವಮೊಗ್ಗದಲ್ಲಿ ಮಳೆಯಾದರೆ ನೀರು ಹರಿದು ಸರಾಗವಾಗಿ ನದಿಗೆ ಸೇರುವುದು ಸಾಧ್ಯವಿಲ್ಲ. ಹೀಗಾಗಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.
ಇತ್ತ ತುಂಗಾ ನದಿ ಹಾಗೂ ಅತ್ತ ಭದ್ರಾ ನದಿ ನೀರು ಕೂಡ್ಲಿಯಲ್ಲಿ ಸೇರಿದ ನಂತರ ಶಿವಮೊಗ್ಗ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ಈಗಾಗಲೇ ಕೂಡ್ಲಿ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ತುಂಗಾ ಮತ್ತು ಭದ್ರಾ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾದರಷ್ಟೇ ಜಲಾಶಯದ ಕೆಳ ಭಾಗದ ಜನರು ನೆಮ್ಮದಿಯಿಂದಿರಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net