

ಶಿವಮೊಗ್ಗ: ದೇಶೀಯವಾಗಿ ವಿಶ್ವ ದರ್ಜೆಯ ವಾಯುಯಾನ ತರಬೇತಿ ಸಾಮರ್ಥ್ಯ ಹೊಂದಲು ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಪಣ ತೊಟ್ಟಿದೆ. ಅದಕ್ಕೆ ಪೂರಕವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಸಂಸ್ಥೆ(ಎಫ್‌ಟಿಒ) ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಂದುಕೊಂಡಂತೆ ನಡೆದರೆ ಮುಂದಿನ ಮೂರು ವರ್ಷದಲ್ಲೇ ಶಿವಮೊಗ್ಗದಲ್ಲಿ ವಿಮಾನ ತರಬೇತಿ ಸಂಸ್ಥೆ ತಲೆಎತ್ತಲಿದೆ.
ರಾಜ್ಯದಲ್ಲಿ ಪೈಲಟ್ ತರಬೇತಿ ಮತ್ತು ವಾಯುಯಾನ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದಕ್ಕಾಗಿ ಒಂದೂವರೆ ವರ್ಷದ ಹಿಂದಷ್ಟೇ ವಿಮಾನಯಾನ ಆರಂಭಿಸಿರುವ ಕೆಎಸ್‌ಐಐಡಿಸಿ(ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್) ಇದೀಗ ಎಫ್‌ಟಿಒ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿ ಟೆಂಡರ್ ಆಹ್ವಾನಿಸಿದೆ.
ರಾಜ್ಯದಲ್ಲಿ ವೈಮಾನಿಕ ಸೌಲಭ್ಯ ವಿಸ್ತರಿಸುವ ಗುರಿ ಹೊಂದಿದ್ದು, ಯಾವುದೇ ಹಣಕಾಸಿನ ನೆರವಿಲ್ಲದೆ 20 ವರ್ಷ ತನ್ನದೇ ಆದ ವೆಚ್ಚದಲ್ಲಿ ಎಫ್‌ಟಿಒ ಕಾರ್ಯನಿರ್ವಹಿಸಲಿದೆ. ಪ್ರತಿವರ್ಷ ಇಲ್ಲಿ 100 ಪೈಲೆಟ್‌ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಆಯ್ಕೆಯಾಗುವ ಬಿಡ್‌ದಾರರು ಇಲ್ಲಿ ಎಫ್‌ಟಿಒ ನಿರ್ಮಿಸಿ, 20 ವರ್ಷ ನಿರ್ವಹಣೆ ಮಾಡಬೇಕು. ಆದರೆ ಇದಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು ಷರತ್ತು ವಿಧಿಸಿದೆ.
ತರಬೇತಿ ಸಂಸ್ಥೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ಜಾಗದಲ್ಲಿ 3,500 ಚದರ ಮೀ. ಜಾಗ ನೀಡಲಾಗುತ್ತದೆ. ಈ ಪೈಕಿ 1,500 ಚದರ ಮೀಟರ್ ಜಾಗ ಟರ್ಮಿನಲ್ ಪಕ್ಕದಲ್ಲಿರುವ ಹ್ಯಾಂಗರ್ ಸಮೀಪದಲ್ಲಿ ನೀಡಲಾಗುತ್ತದೆ. 2,000 ಚದರ ಮೀ. ಜಾಗವನ್ನು ಟರ್ಮಿನಲ್ ಹೊರಭಾಗದಲ್ಲಿ ನೀಡಲಾಗುತ್ತಿದೆ. ಇಲ್ಲಿ ಕ್ಲಾಸ್‌ರೂಂ, ಸಿಮುಲೇಟರ್ ವಿಭಾಗ, ಗ್ರಂಥಾಲಯ, ರೇಡಿಯೋ ಟೆಲಿಫೋನ್ ತರಬೇತಿ, ಟೆಸ್ಟಿಂಗ್ ರೂಮ್, ಕಚೇರಿಗಳು ಸೇರಿದ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.
ಕನ್ನಡಿಗರಿಗೆ ಶೇ.25ರಷ್ಟು ಸೀಟ್
ತರಬೇತಿ ಸಂಸ್ಥೆಯಲ್ಲಿ ಕನ್ನಡಿಗರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದ್ದು ತರಬೇತಿಗೆ ಆಯ್ಕೆ ಮಾಡುವಾಗ ಶೇ.25ರಷ್ಟು ಸೀಟುಗಳನ್ನು ಕನ್ನಡಿಗರು ಮತ್ತು ಮಹಿಳೆಯರಿಗೆ ಮೀಸಲಿಡಬೇಕು. ಅವರಿಗೆ ಶುಲ್ಕ ವಿನಾಯಿತಿ ನೀಡಬೇಕು. ಏಜೆನ್ಸಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪರಿಶೀಲನೆಗೆ ಕೆಎಸ್‌ಐಐಡಿಸಿಗೆ ಪಟ್ಟಿ ರವಾನಿಸಬೇಕು. ತರಬೇತಿ ಸಂಸ್ಥೆ ಆರಂಭವಾದ ಮೊದಲ ವರ್ಷ 50 ಅಭ್ಯರ್ಥಿಗಳನ್ನು ದಾಖಲು ಮಾಡಲಾಗುತ್ತದೆ. ಮೂರನೇ ವರ್ಷದ ಹೊತ್ತಿಗೆ 100 ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.