

| ಮಂಜುನಾಥ ಕೆ. ಬೆಂಗಳೂರು
ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳ ಬಾಡಿಗೆ ದರವನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಗೆ ತರುವಂತೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಸರ್ಕಾರ ನಿರ್ದೇಶನ ಕೊಟ್ಟಿದೆ. ದರ ಪರಿಷ್ಕರಿಸಲು 2012ರಿಂದಲೇ ಮನವಿ ಮಾಡಲಾಗಿತ್ತು. ಈಗ ನಿಗದಿಪಡಿಸಿರುವ ದರ ತೃಪ್ತಿಕರವಾಗಿಲ್ಲ. ಆದ್ದರಿಂದ ಮರು ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಮಾಲೀಕರು ತೀರ್ವನಿಸಿದ್ದಾರೆ.
ದರ ಏರಿಕೆ ಯಾಕೆ?: ವಾಹನ ವೆಚ್ಚ, ನೋಂದಣಿ ವೆಚ್ಚ, ವಾಹನದ ತೆರಿಗೆ, ಬಿಡಿಭಾಗಗಳು, ವಿಮಾ ಪಾಲಿಸಿ ಹಾಗೂ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳ ಪರಿಷ್ಕರಿಸುವುದು ಅಗತ್ಯವೆಂದು ಸರ್ಕಾರ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರ ಉಪಕಲಂ(1) ಅಡಿ 19-03 2002 ರ ಅಧಿಸೂಚನೆಯನ್ನು ಪರಿಷ್ಕರಿಸಿ, ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ನಿಗದಿಪಡಿಸಲು ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಬಾಡಿಗೆ ದರಗಳನ್ನು ಕೂಡಲೇ ಜಾರಿಗೆ ಬರುವಂತೆ ಪರಿಷ್ಕರಿಸಿ ಸರ್ಕಾರ ಆದೇಶಿಸಿದೆ.
ಸರ್ಕಾರ 2012ರ ಲಾರಿಗಳ ಬಾಡಿಗೆ ದರವನ್ನು ನಿಗದಿ ಪಡಿಸಿದೆ. ಆದರೆ ನಾವು 2023ರ ದರವನ್ನು ನಿಗದಿಪಡಿಸುವಂತೆ ಕೇಳುತ್ತಿದ್ದೇವೆ. ಲಾರಿ ಬಾಡಿಗೆ ದರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮತ್ತು ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. | ಷಣ್ಮುಗಪ್ಪ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ
ಮಾಲೀಕರು ಹೇಳುವುದೇನು?: ಲಾರಿಗಳ ಬಾಡಿಗೆ ದರ ಪರಿಷ್ಕರಿಸುವಂತೆ 2012ರಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಆಟೋ ರಿಕ್ಷಾ, ಬಸ್ಗಳಿಗೆ ದರ ನಿಗದಿಪಡಿಸಿದ್ದಾರೆ. ಆದರೆ, ಲಾರಿಗೆ ಬಾಡಿಗೆ ದರ ನಿಗದಿಪಡಿಸಿರಲಿಲ್ಲ. ಇದೀಗ ಬಾಡಿಗೆ ದರ ನಿಗದಿಪಡಿಸಿದ್ದಾರೆ. ಆದರೆ, ಅದು ತೃಪ್ತಿಯಾಗಿಲ್ಲ. ಲಾರಿ ಬಾಡಿಗೆ ದರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮತ್ತು ಸಾರಿಗೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸರಿಯಾದ ಬಾಡಿಗೆ ದರ ನಿಗದಿ ಮಾಡಿದರೆ ಗ್ರಾಹಕರಿಗೆ ಹಾಗೂ ಮಾಲೀಕರ ಮಧ್ಯೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಪ್ ಆಂಡ್ ಡೌನ್ ಅಂದರೆ ಎರಡು ಕಡೆಯ ಬಾಡಿಗೆಯನ್ನು ನಿಗದಿಪಡಿಸಬೇಕು ಎಂದು ಲಾರಿ ಮಾಲೀಕರು ತಿಳಿಸಿದ್ದಾರೆ.