

ಬೀರೂರು: ಸರ್ಕಾರ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಪಟ್ಟಣದಲ್ಲಿ ಐದು ಕಡೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವೇದಿಕೆಯನ್ನು ರಂಗೋಲಿ ಹಾಕುವ ಮೂಲಕ ಶೃಂಗರಿಸಲಾಗಿತ್ತು. ನಾನೇ ಲಕ್ಷ್ಮೀ ನಾನೇ ನಾಯಕಿ ಎನ್ನುವ ಸಾಲುಗಳು ಎಲ್ಲೆಡೆ ಕಂಡು ಬಂದವು.
ಬೀರೂರಿನ ಪುರಸಭೆ ವ್ಯಾಪ್ತಿಯ ಗಣಪತಿ ಪೆಂಡಾಲ್, ಶ್ರೀ ಬೀರಲಿಂಗೇಶ್ವರ ಸಮುದಾಯ ಭವನ, ಗುರುಭವನ, ಎಸ್.ಎಂ.ಕೃಷ್ಣ ಸಮುದಾಯ ಭವನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಹಾಗೂ ಚಾಲನೆ ನೀಡುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿಗಳು ಯೋಜನೆಗೆ ಚಾಲನೆ ನೀಡಿದ ಕೂಡಲೇ ಪಟ್ಟಣದ ಕೆಲವರಿಗೆ ಆ ತಕ್ಷಣ ಎಪಿಬಿಎಸ್ ಮೂಲಕ ಹಣ ಪಾವತಿಯಾಗಿರುವ ಸಂದೇಶ ರವಾನೆಯಾಯಿತು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಲಾನುಭವಿಗಳಿಗೆ ನೀಡುತ್ತಿರುವ ಹಣ ಸದುಪಯೋಗಪಡಿಸಿಕೊಳ್ಳಬೇಕು. ಸ್ವಾವಲಂಬಿ ಬದುಕಿಗೆ ಶಕ್ತಿ ನೀಡಿರುವ ಸರ್ಕಾರ ಸೀ ಶಕ್ತಿ ವೃದ್ಧಿಸುವಲ್ಲಿ ಮಾಡಿರುವ ಗ್ಯಾರಂಟಿ ಯೋಜನೆಗಳು ಶ್ಲಾಘನೀಯ ಎಂದರು.
ಪುರಸಭೆ ಮುಖ್ಯಾಧಿಕಾರಿ ಎ.ಡಿ.ಶಾಂತಲಾ, ಸದಸ್ಯೆ ಮೀನಾಕ್ಷಮ್ಮ, ಪುರಸಭೆ ವ್ಯವಸ್ಥಾಪಕ ಪ್ರಕಾಶ್, ಪರಿಸರ ಅಭಿಯಂತರ ನೂರುದ್ದೀನ್, ಇಂಜಿನಿಯರ್ ವೀಣಾ ಹಾಗೂ ನೂರಾರು ಮಹಿಳೆಯರು ಭಾಗವಹಿಸಿದ್ದರು.