

ಮಹಾಶ್ವಾಸ: ವಾತದ ಪ್ರಾಧಾನ್ಯದಿಂದ ಆಗುವ ಉಸಿರಾಟದ ತೊಂದರೆಯಾಗಿದ್ದು ಕಷ್ಟಕರವಾಗಿ ದೀರ್ಘವಾದ ಉಸಿರಾಟ ಆಗುತ್ತಿದ್ದು ಉಗ್ರಗೊಂಡ ಎತ್ತಿನಂತೆ ಶಬ್ದ ಉಂಟಾಗುತ್ತಿರುತ್ತದೆ. ಮಲಬದ್ಧತೆ, ಮೂತ್ರ ತಡೆ, ಕಣ್ಣು ಹಾಗೂ ಬಾಯಿ ತೆರೆದು ಉಸಿರಾಟವಾಗುತ್ತದೆ. ಧ್ವನಿಯು ಕ್ಷೀಣವಾಗಿ ಇಂದ್ರಿಯಗಳ ಪಟುತ್ವವೂ ಕಡಿಮೆಯಾಗಿರುತ್ತದೆ. ನಿಸ್ಸಹಾಯಕತೆ ವ್ಯಕ್ತಪಡಿಸುತ್ತಾ ಉಸಿರಾಡುವ ಶಬ್ದವು ದೂರದಿಂದಲೇ ಕೇಳುತ್ತದೆ. ಚಿಕಿತ್ಸೆಗೆ ಸರಿಯಾದ ಸ್ಪಂದನೆ ಇಲ್ಲದಿರುವುದರಿಂದ ಬದುಕು ಕಷ್ಟಕರವಾಗುತ್ತದೆ.
ಊರ್ಧ್ವಶ್ವಾಸ: ಶ್ವಾಸಕೋಶದ ಈ ವಿಧವೂ ವಾತದ ಉತ್ಕರ್ಷದಿಂದ ಉಂಟಾಗುತ್ತದೆ. ದೀರ್ಘವಾದ ಪ್ರಯಾಸದಿಂದ ಕೂಡಿದ ನಿಶ್ವಾಸ, ಮಧ್ಯೆ ಕೆಲವೊಮ್ಮೆ ಉಸಿರಾಟಕ್ಕೆ ತಡೆಯೂ ಉಂಟಾಗುತ್ತದೆ. ಬಾಯಿಯಲ್ಲಿ ಕಫದ ಲೇಪನ, ಶ್ವಾಸನಾಳ, ಗಂಟಲುಗಳು ಕಫದಿಂದ ತುಂಬಿ ಉಸಿರು ದುರ್ವಾಸನೆಯಿಂದ ಕೂಡಿರುತ್ತದೆ. ಇದರ ಚಿಕಿತ್ಸೆ ಕೂಡ ಫಲಕಾರಿ ಆಗುವುದು ಕಷ್ಟಕರ.
ಛಿನ್ನಶ್ವಾಸ: ಪಿತ್ತದೋಷದ ಪ್ರಾಧಾನ್ಯತೆಯು ಇದರಲ್ಲಿ ಕಂಡುಬರುತ್ತದೆ. ತಡೆಯೊಂದಿಗೆ ಉಸಿರಾಟ ತ್ರಾಸದಾಯಕವಾಗಿ ನಡೆಯುತ್ತಿದ್ದು ಮಧ್ಯದಲ್ಲಿ ಬಲಹಾಕಿ ದೊಡ್ಡದಾಗಿ ಉಸಿರಾಟ ನಡೆಯುತ್ತದೆ. ಎದೆಯ ಒಳಗೆ ಗಾಯವಾದಂತೆ ನೋವಿನ ಅನುಭವ ಇರುತ್ತದೆ. ಹೊಟ್ಟೆ ಉಬ್ಬರ, ಅಧಿಕ ಬೆವರು, ಆಗಾಗ ಎಚ್ಚರತಪ್ಪುವುದು, ಮೂತ್ರಾಶಯದಲ್ಲಿ ಉರಿ, ಕಣ್ಣುಗಳು ಜೋರಾಗಿ ಉರುಳುವುದು, ಶರೀರ ಕ್ಷೀಣತೆ, ಉಸಿರಾಟ ಕಷ್ಟವಾಗಿ ಕಣ್ಣುಗಳು ಕೆಂಪಾಗುವುದು, ಮಾನಸಿಕವಾಗಿ ಕುಗ್ಗುವುದು, ಬಾಯಿ ಒಣಗುವುದು, ದೇಹ ಕಪ್ಪಿಡುವುದು, ಅಸಂಬದ್ಧ ಮಾತು ಇವೆಲ್ಲಾ ಲಕ್ಷಣಗಳು ಕಾಣಿಸಿಕೊಂಡು ಚಿಕಿತ್ಸೆಗೆ ಕಷ್ಟಕರವಾಗುತ್ತದೆ.
ಕ್ಷುದ್ರ ಶ್ವಾಸ: ಧೂಳು, ಕಲುಷಿತ ವಾತಾವರಣದಲ್ಲಿನ ಕಲ್ಮಶ ಕಣಗಳು, ಹೊಗೆ ಮುಂತಾದ ಬಾಹ್ಯದ್ರವ್ಯಗಳು ಶ್ವಾಸನಾಳದ ಮೂಲಕ ಒಳಪ್ರವೇಶಿಸಿದಾಗ ಉದರದಲ್ಲಿರುವ ವಾತವು ಮೇಲ್ಮುಖವಾಗಿ ಚಲಿಸಿ ಸ್ರೋತಸ್ನಲ್ಲಿ ತಡೆ ಉಂಟುಮಾಡಿ ಕ್ಷುದ್ರಶ್ವಾಸ ಉಂಟಾಗುತ್ತದೆ. ಇದು ಅಷ್ಟೇನೂ ತೀವ್ರವಾಗಿರುವುದಿಲ್ಲ. ಉಳಿದ ಶ್ವಾಸ ರೋಗಗಳಂತೆ ನೋವು, ಕಷ್ಟದ ಉಸಿರಾಟ, ಆಹಾರ ಕುಡಿಯಲು ನುಂಗಲು ಕಷ್ಟವಾಗುವುದು, ಇಂದ್ರಿಯಗಳ ಬಲಹಾನಿ, ದೇಹದ ಅಂಗಾಂಗಗಳ ಪೀಡನೆ ಇದ್ಯಾವುವೂ ಇರುವುದಿಲ್ಲ. ಸ್ವಲ್ಪವೇ ಕಾಲ ಬಾಧಿಸಿ ಮತ್ತೆ ಸಹಜಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ.
ತಮಕಶ್ವಾಸ: ಶ್ವಾಸರೋಗದಲ್ಲಿ ಹೆಚ್ಚಿನ ಪ್ರಾಧಾನ್ಯದಿಂದ ಚಿಕಿತ್ಸೆ ನೀಡಿ ಗುಣಪಡಿಸಬೇಕಾದುದು ತಮಕಶ್ವಾಸ. ತಮ ಅಂದರೆ ಕತ್ತಲು. ಶ್ವಾಸ ಎಂದರೆ ಇಲ್ಲಿ ಉಸಿರಾಟದ ತೊಂದರೆ. ಉಸಿರಾಟವು ಕಷ್ಟಕರವಾಗಿ ಸ್ವಲ್ಪ ಹೊತ್ತು ಕಣ್ಣುಕತ್ತಲು ಹೋದಂತೆ ಅನುಭವ ಆಗುವುದರಿಂದ ತಮಕ ಶ್ವಾಸವೆಂಬ ಹೆಸರು ಬಂದಿದೆ. ಸಾಮಾನ್ಯವಾಗಿ ಮೋಡಕವಿದ ವಾತಾವರಣವಿದ್ದಾಗ ಉಸಿರಾಟದ ತೊಂದರೆ ತೀವ್ರವಾಗುವುದರಿಂದಲೂ ತಮಕಶ್ವಾಸ ಎನ್ನಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಿದ್ದರೆ ಆಸ್ತಮಾ. ಕಫ ಪ್ರಧಾನವಾಗಿದ್ದು ವಾತ, ಪಿತ್ತಗಳು ಅನುಬಂಧಿಯಾಗಿರುತ್ತವೆ. ವಾತವು ಮೇಲ್ಮುಖವಾಗಿ ಚಲಿಸುತ್ತ ಗಂಟಲು, ತಲೆ, ಎದೆಭಾಗದಲ್ಲಿನ ಕಫವನ್ನು ಹೊರಹಾಕಲು ಪ್ರಯತ್ನಿಸುತ್ತದೆ.
ಮೂಗಿನಲ್ಲೂ ಕಫದಿಂದ ತಡೆ ಉಂಟಾಗಿ ಘುರ್ ಘುರ್ ಶಬ್ದದೊಂದಿಗೆ ಅತಿವೇಗದ ತೀವ್ರ ಕಷ್ಟದಾಯಕ ಉಸಿರಾಟವಾಗುತ್ತದೆ. ಕೆಲವೊಮ್ಮೆ ಇದರಿಂದ ಎಚ್ಚರ ತಪ್ಪುವುದು, ತೀವ್ರ ಕೆಮ್ಮು, ಉಸಿರಾಟಕ್ಕೆ ತಡೆ, ಕೆಮ್ಮುವಾಗ ತಲೆ ತಿರುಗಿದಂತಾಗುವುದು, ಕಫವು ಹೊರಹೋಗದೆ ಮನಸ್ಸು ವಿಚಲಿತವಾಗುವುದು, ಸಿಕ್ಕಿ ಹಾಕಿಕೊಂಡ ಕಫವು ಒಮ್ಮೆ ಹೊರಹೋದೊಡನೆ ಮನಸ್ಸು ತಿಳಿಯಾಗುವುದು. ಒಡಕು ಧ್ವನಿಯಿದ್ದು ಮಾತನಾಡಲು ಕಷ್ಟವಾಗುವಂತಹ ಪರಿಸ್ಥಿತಿಯಿರುತ್ತದೆ. ಮಲಗಿದಾಗ ಉಸಿರಾಟದ ತೊಂದರೆ ಹೆಚ್ಚಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ.
ಎದೆಯ ಪಕ್ಕೆಯು ಹಿಡಿದುಕೊಳ್ಳುತ್ತದೆ. ಮೆಲ್ಮುಖವಾಗಿ ದೃಷ್ಟಿ ನೆಟ್ಟಿದ್ದು ಹಣೆಯಲ್ಲಿ ಬೆವರು ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಬಾಯಿ ಒಣಗಿ, ಆಗಾಗ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಮೋಡ ಕವಿದ ವಾತಾವರಣ, ಪೂರ್ವದಿಕ್ಕಿನ ಗಾಳಿ, ಕಫ ಹೆಚ್ಚಿಸುವ ಆಹಾರ ಪದಾರ್ಥಗಳು ತಮಕ ಶ್ವಾಸವನ್ನು ತೀವ್ರಗೊಳಿಸುತ್ತದೆ. ಈ ಅಸ್ತಮಾ ರೋಗದಲ್ಲಿ ಪ್ರತಮಕ, ಸಂತಮಕ ಎಂಬೆರಡು ವಿಧಗಳನ್ನು ಆಯುರ್ವೆದ ಹೇಳಿದೆ.
ಮೇಲಿನ ಲಕ್ಷಣಗಳ ಜೊತೆಯಲ್ಲಿ ಜ್ವರ ಬರುವುದು, ಎಚ್ಚರತಪ್ಪುವ ಲಕ್ಷಣಗಳಿದ್ದರೆ ಅದನ್ನು ಪ್ರತಮಕ ಎನ್ನುತ್ತೇವೆ. ದೇಹದೊಳಗೆ ನಡೆಯುವ ರೋಗಕಾರಕ ಸೂಕ್ಷ್ಮ ಕ್ರಿಮಿಗಳ ಪಾತ್ರ ಇದರಲ್ಲಿರುತ್ತದೆ. ಸಂತಮಕದಲ್ಲಿ ಧೂಳು, ಹೊಗೆ, ತಂಪು ವಾತಾವರಣ, ಶರೀರದ ಸಹಜ ವೇಗಗಳನ್ನು ತಡೆಯುವುದು, ಅಜೀರ್ಣ ಮೊದಲಾದವುಗಳಿಂದ ಉಸಿರಾಟದ ತೊಂದರೆ ತೀವ್ರವಾಗುತ್ತದೆ. ರೋಗಿಗೆ ಕತ್ತಲು ಆವೃತವಾದ ಅನುಭವವಾಗುತ್ತದೆ.
ಬಾಹ್ಯಕಾರಣಗಳು ಸಂತಮಕ ರೋಗದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಲವಂತರಲ್ಲಿ ಕಾಣಿಸಿಕೊಳ್ಳುವ ಅಥವಾ ಆಂಶಿಕ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವ, ದೀರ್ಘಕಾಲದಿಂದ ಇಲ್ಲದ ಎಲ್ಲಾ ವಿಧದ ಶ್ವಾಸರೋಗಗಳನ್ನು ಪ್ರಶಸ್ತ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಶ್ವಾಸರೋಗ ಬರದಂತೆ ತಡೆಯುವ, ಬಂದರೆ ನಿಯಂತ್ರಿಸುವ ಹಾಗೂ ಗುಣಪಡಿಸುವ ವಿಧಾನಗಳನ್ನು ತಿಳಿದರೆ ಒಳಿತು. (ಪ್ರತಿಕ್ರಿಯಿಸಿ: vvsudina@gmail.com)