

ಬೆಂಗಳೂರು: ಬ್ಯಾಕ್‌ಲಾಗ್ ಭರ್ತಿಯಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರ ವಿರುದ್ಧ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ(MLA Prasad Abbayya expresses deep dissatisfaction with officials for being negligent in filling the backlog) ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರದ 26 ಇಲಾಖೆಗಳು ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ವಿನಾಯಿತಿ ಕೇಳಿರುವುದು ಸಂವಿಧಾನ ಬಾಹಿರ. ಈ ಬೇಡಿಕೆ ಇಟ್ಟಿರುವ ಇಲಾಖಾ ಬ್ಯಾಕ್‌ಲಾಗ್ ಹುದ್ದೆ ನೇಮಕ ಸಂದರ್ಭದಲ್ಲಿ ಮಾತ್ರ ಆರ್ಥಿಕ ಮುಗ್ಗಟ್ಟು ಮುಂಚೂಣಿಗೆ ತರಲಾಗುತ್ತದೆ. ಬೇರೆ ಹುದ್ದೆ ನೇಮಕ ಸಂದರ್ಭದಲ್ಲಿ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತಾವು ಅಧ್ಯಕ್ಷರಾಗಿರುವ ಕೊಳೆಗೇರಿ ಮಂಡಳಿಯಲ್ಲೂ ಇದೇ ರೀತಿ ಆಗಿದೆ. ಕೆಲ ಅಧಿಕಾರಿಗಳಿಗೆ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ನ್ಯಾಯ ಒದಗಿಸುವ ಮನಸ್ಸಿಲ್ಲ. ಹಾಗಾಗಿ ಈ ಸಮಸ್ಯೆ ಉದ್ಭವಿಸುತ್ತದೆ ಎಂದು ಗುಡುಗಿದರು.
ಬ್ಯಾಕ್‌ಲಾಗ್ ಭರ್ತಿಯಲ್ಲಿ ಮಾತ್ರವಲ್ಲ. ಬಡ್ತಿ ನೀಡುವಲ್ಲೂ ಅನ್ಯಾಯ ಆಗಿದ್ದು ಸಾವಿರಾರು ಹುದ್ದೆಗಳು ಬ್ಯಾಕ್‌ಲಾಗ್ ಅನ್ವಯ ಬಡ್ತಿ ದೊರೆಯದೇ ಹಾಗೇ ಉಳಿದಿವೆ ಎಂದು ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆ ಬಿಟ್ಟು ಹೋಗಿದ್ದರೆ ಅವುಗಳನ್ನು ಪತ್ತೆ ಮಾಡಲು ರಾಜ್ಯಾದ್ಯಂತ ಐದು ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳು, ಸಹಕಾರಿ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001 ಹಾಗೂ 2001ರ ನಂತರದಲ್ಲಿ ಪರಿಶಿಷ್ಟ ಜಾತಿಯ 16,413 ಮತ್ತು ಪರಿಶಿಷ್ಟ ಪಂಗಡದ 4,963 ಸೇರಿದಂತೆ ಒಟ್ಟು 21,376 ಹುದ್ದೆಗಳನ್ನು ಗುರುತಿಸಲಾಗಿದೆ ಎಂದರು.
ಗುರುತಿಸಿರುವ ಹುದ್ದೆಗಳ ಪೈಕಿ ಇದುವರೆಗೆ ಪರಿಶಿಷ್ಟ ಜಾತಿ 15,286 ಮತ್ತು ಪರಿಶಿಷ್ಟ ಪಂಗಡದ 4,379 ಸೇರಿದಂತೆ ಒಟ್ಟು 19,665 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕೆಲವು ಇಲಾಖೆ ಅಥವಾ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಮತ್ತು ಮುಚ್ಚಿರುವ ಕಾರಣ ಒಟ್ಟು 795 ಹುದ್ದೆಗಳನ್ನು ಭರ್ತಿ ಮಾಡಲು ವಿನಾಯಿತಿ ಕೋರಿವೆ. ಉಳಿದ 916 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿಯಿದೆ. ಈ ಪೈಕಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 530, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 185 ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 112 ಹುದ್ದೆಗಳು ಸೇರಿ ಒಟ್ಟು 827 ಹುದ್ದೆಗಳಿವೆ. ಉಳಿದ ಇಲಾಖೆಗಳಲ್ಲಿ 89 ಹುದ್ದೆಗಳಿವೆ ಎಂದು ವಿವರಿಸಿದರು.
‘ರಾಜ್ಯದಲ್ಲಿ 21376 ಬ್ಯಾಕ್‌ಲಾಗ್ ಹುದ್ದೆಗಳಿದ್ದು, ಈಗಾಗಲೇ 19666 ಹುದ್ದೆಗಳ ಭರ್ತಿ ಪ್ರಕ್ರಿಯೆ ಶುರುವಾಗಿದೆ. 916 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಈ ಪೈಕಿ 795 ಹುದ್ದೆಗಳನ್ನು ಭರ್ತಿಯಿಂದ ವಿನಾಯ್ತಿ ನೀಡುವಂತೆ ವಿವಿಧ ಇಲಾಖೆಗಳಿಂದ ಕೋರಿಕೆ ಬಂದಿದೆ. ಆದರೆ ಸಂಪುಟ ಉಪ ಸಮಿತಿಯ ಮುಂದೆ ವಿಷಯವನ್ನು ಇಟ್ಟು, ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.
ಯಾರು ಏನೇ ಮಾಡಿದರೂ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಖಚಿತ. ಈ ಹುದ್ದೆ ನೇಮಕಾತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು. ಬಡ್ತಿ ಕೋಟಾದ ಹುದ್ದೆಗಳಿಗೆ ವಿಳಂಬವಿಲ್ಲದೇ ಭರ್ತಿ ಮಾಡಿಕೊಳ್ಳಲು ಸೂಚನೆ ಕೊಡುತ್ತೇವೆ.
-ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ.