ಯಾರಿಗೆ ಪಂಚರಾಜ್ಯ?; ಇಂದು ಮತದಾರ ಪ್ರಭುವಿನ ಜನಾದೇಶ

Election
Published on

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಹೊರಬೀಳಲಿದ್ದು, ಇಡೀ ದೇಶದ ಚಿತ್ತ ಉತ್ತರ ಪ್ರದೇಶದತ್ತ ನೆಟ್ಟಿದೆ. ಉತ್ತರ ಪ್ರದೇಶದಲ್ಲಿ ಮರು ಆಯ್ಕೆ ಬಯಸಿರುವ ಬಿಜೆಪಿ, ಪಿಎಂ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ ವರ್ಚಸ್ಸಿನಡಿ ಮತ ಯಾಚಿಸಿದೆ. ಸಮಾಜವಾದಿ ಪಕ್ಷದ ಜಿದ್ದಾಜಿದ್ದಿ ಹೋರಾಟದ ನಡುವೆಯೂ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಜಯಭೇರಿಯ ಮುನ್ಸೂಚನೆ ನೀಡಿವೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ, ನಂತರದಲ್ಲಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ಚುನಾವಣೆ ಎದುರಿಸಿದ ಬಿಜೆಪಿಗೆ ಕೃಷಿಕರು ಹೆಚ್ಚಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಸವಾಲನ್ನೊಡ್ಡಿದ್ದೂ ಸುಳ್ಳಲ್ಲ. ಆದರೂ, ಕಾನೂನು ವ್ಯವಸ್ಥೆ ಸುಧಾರಣೆ, ಕರೊನಾ ಸಂಕಷ್ಟದಲ್ಲಿ ನೆರವಾಗಿರುವುದು, ಪಿಎಂ ಆವಾಸ್ ಯೋಜನೆಯಲ್ಲಿ ಮನೆ ಕಟ್ಟಲು ಹಣ, ಸೇರಿದಂತೆ ಹತ್ತು ಹಲವು ಅಭಿವೃದ್ಧಿಪರ ಕಾರ್ಯ ಬಿಜೆಪಿಗೆ ಮತಲಾಭ ತಂದುಕೊಡುವ ನಿರೀಕ್ಷೆಯಿದೆ.

ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳದ ಬಗ್ಗೆ ಜನರಲ್ಲಿ ಕಳವಳವಿದ್ದರೂ, ಆಡಳಿತ ಸುಧಾರಣೆ, ಬಿಜೆಪಿಯ ದಿಟ್ಟ ನಾಯಕತ್ವ ಮತದಾರನ ಗಮನ ಸೆಳೆದಿದೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಶಕ್ತಿಮೀರಿ ಹೋರಾಡಿದ್ದು, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೂ ಕರೆಸಿಕೊಂಡು ಪ್ರಚಾರ ಮಾಡಿದ್ದರು. ಬಿಜೆಪಿ ಹಿಂದು ಮತ ಕ್ರೋಢೀಕರಣ ತಂತ್ರಗಾರಿಕೆಗೆ ಪ್ರತಿಯಾಗಿ ಹಲವು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದ ಅಖಿಲೇಶ್ ಹಿಂದುಗಳನ್ನು ಭಾವನಾತ್ಮಕವಾಗಿ ಸೆಳೆಯಲೂ ಯತ್ನಿಸಿದ್ದರು. ಇಡೀ ಚುನಾವಣೆಯಲ್ಲಿ ಮಾಯಾವತಿ ಮೌನವೇ ಅಚ್ಚರಿ ಮೂಡಿಸಿತ್ತು. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದರೂ, ಎಷ್ಟರಮಟ್ಟಿಗೆ ಬಿಜೆಪಿ ಮತ್ತು ಸಮಾಜವಾದಿ ಮತಗಳನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಚುನಾವಣೆಯಲ್ಲೂ ಸ್ಪರ್ಧಿಸಲು ಹಿಂದೇಟು ಹಾಕಿದ ಮಾಯಾವತಿ ಕಾರ್ಯಕರ್ತರ ಹುರುಪು ಕಡಿಮೆಯಾಗಲ ಕಾರಣರಾಗಿದ್ದರು.

ಪಂಜಾಬ್: ಇಲ್ಲಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ನೇತೃತ್ವದ ಸರ್ಕಾರ ಬಿಟ್ಟರೆ ಮೂರನೇ ಪರ್ಯಾಯ ಸರ್ಕಾರ ಅಧಿಕಾರಕ್ಕೆ ಬಂದೇ ಇಲ್ಲ. ಈ ಬಾರಿ ಆಮ್ ಆದ್ಮಿ ಕಣದಲ್ಲಿದ್ದು, ದಿಲ್ಲಿಯಲ್ಲಿ ಯಶಸ್ವಿ ಆಡಳಿತ, ನಾಯಕತ್ವದ ಸ್ಪಷ್ಟತೆಯನ್ನು ಜನರ ಮುಂದಿಟ್ಟದ್ದರಿಂದ ಮತದಾರನ ಮನ ಗೆದ್ದಿರುವ ಸಾಧ್ಯತೆಯಿದೆ. ಚುನಾವಣೋತ್ತರ ಸಮೀಕ್ಷೆಗಳೂ ಆಪ್ ಅಧಿಕಾರಕ್ಕೇರಲಿದೆ ಎಂದೇ ಸಾರಿವೆ. ಒಳಜಗಳಗಳಿಂದ ಹೈರಾಣಾಗಿದ್ದ ಕಾಂಗ್ರೆಸ್​ಗೆ ದಲಿತ ಸಿಖ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಜನರನ್ನು ತಕ್ಕಮಟ್ಟಿಗೆ ಸೆಳೆದರೂ, ಸದೃಢ ಆಡಳಿತ ಮೂಲಕ ರಾಜ್ಯಾದ್ಯಂತ ಹವಾ ಸೃಷ್ಟಿಸಲು ಅವರಿಗೆ ಕಾಲವಕಾಶವೇ ಇರಲಿಲ್ಲ. 119 ದಿನಗಳ ಕಾಲ ಸಿಎಂ ಆಗಿದ್ದ ಚನ್ನಿ, ಜನಸಮೂಹವನ್ನು ಎಷ್ಟರಮಟ್ಟಿಗೆ ಸೆಳೆದಿದ್ದಾರೆ ಎನ್ನುವುದು ಫಲಿತಾಂಶದಲ್ಲಿ ಗೊತ್ತಾಗಲಿದೆ. ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವದ ಹೊಸ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಭಾರೀ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಪ್ರತಿರೋಧ ಪ್ರದರ್ಶಿಸಿದೆ. ಆದರೆ ಇದು ಮತಗಳಾಗಿ ಪರಿವರ್ತನೆಯಾಗಿದೆಯೇ ಎನ್ನುವುದು ಮುಖ್ಯ.

ಉತ್ತರಾಖಂಡ, ಗೋವಾ ಮತ್ತು ಮಣಿಪುರ ಸಣ್ಣ ರಾಜ್ಯಗಳು. ಅಸ್ಪಷ್ಟ ಜನಾದೇಶದ ಲಕ್ಷಣಗಳಿರುವ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಅಧಿಕಾರ ಸ್ಥಾಪಿಸಲು ತೆರೆಮರೆಯಲ್ಲೇ ಯತ್ನಿಸುತ್ತವೆ. ಇಲ್ಲಿ ಸದ್ಯ ಬಿಜೆಪಿ ನೇತೃತ್ವದ ಸರ್ಕಾರಗಳಿವೆ. ಕನ್ನಡಿಗರೂ ಚುನಾವಣೆಗಳಲ್ಲಿ ಕೆಲಸ ಮಾಡಿ ಗಮನ ಸೆಳೆದಿರುವುದು ವಿಶೇಷ. ಉತ್ತರಾಖಂಡ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉತ್ತರ ಪ್ರದೇಶದ ಸಹ ಉಸ್ತುವಾರಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗೋವಾ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಗೋವಾ ಕಾಂಗ್ರೆಸ್ ಉಸ್ತುವಾರಿಯಾಗಿ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಕಾರ್ಯನಿರ್ವಹಿಸಿದ್ದರು. ಐದೂ ರಾಜ್ಯಗಳಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಿಂದ ಹಿಡಿದು, ಬಿಕ್ಕಟ್ಟು-ಇಕ್ಕಟ್ಟುಗಳನ್ನು ಬಗೆಹರಿಸಿ ಕಾರ್ಯಕರ್ತ ಪಡೆಯನ್ನು ಗಟ್ಟಿಗೊಳಿಸಲು ತೆರೆಮರೆಯಲ್ಲಿ ಶ್ರಮಿಸಿದ್ದು ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net