ಪಂಚರಾಜ್ಯ ಚುನಾವಣೆ ಫಲಿತಾಂಶದ ಪಾಠಗಳು

pancharajya
Published on

ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಮತದಾರರು ಎಲ್ಲ ರಾಜಕೀಯ ಪಕ್ಷಗಳಿಗೂ ಸಂದೇಶ ರವಾನಿಸಿದ್ದಾರೆ ಎನ್ನಬಹುದು.

ಬಹುತೇಕ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾಗಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳೆರಡೂ ಈ ಫಲಿತಾಂಶದಿಂದ ಪಾಠಕಲಿತು, ಮುಂದಿನ ಹೆಜ್ಜೆಯಿಡಬೇಕಿದೆ. ಬೇರೆ ಬೇರೆ ಕಾರಣಗಳಿಗಾಗಿ ಪಶ್ಚಿಮ ಬಂಗಾಳ ಹೆಚ್ಚು ಸುದ್ದಿ ಸದ್ದು ಮಾಡಿತ್ತು. ಬಂಗಾಳದಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿ ಬಯಕೆ ಕೈಗೂಡದಿದ್ದರೂ ಕಳೆದ ಸಲಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಅದು ಯಶಸ್ವಿಯಾಗಿದೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರೂ, ಅವರ ಪಕ್ಷ ಭರ್ಜರಿ ಸಾಧನೆ ಮಾಡಿದೆ. ಚುನಾವಣಾ ಸಂದರ್ಭದಲ್ಲಿ ಬಂಗಾಳ ಕೆಲವು ಅಹಿತಕರ ಬೆಳವಣಿಗೆಗಳಿಗೂ ಸಾಕ್ಷಿಯಾದದ್ದು ವಿಷಾದಕರ ಎಂದೇ ಹೇಳಬೇಕು. ತಮಿಳುನಾಡಲ್ಲಿ ಎಐಎಡಿಎಂಕೆಯು ಆಡಳಿತ ವಿರೋಧಿ ಅಲೆಗೆ ತತ್ತರಿಸಿದೆ. ಎಐಎಡಿಎಂಕೆಯಲ್ಲಿನ ಬಣ ಗಳು, ಒಳಜಗಳದ ಲಾಭವನ್ನು ಡಿಎಂಕೆ ತನ್ನ ಪರವಾಗಿ ತಿರುಗಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿ ಅಧಿಕಾರಗ್ರಹಣಕ್ಕೆ ಸಜ್ಜಾಗಿದೆ.

ಅಸ್ಸಾಂನಲ್ಲಿ ಬಿಜೆಪಿಗೆ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಯಿಂದ ತೊಂದರೆ ಎದುರಾಗಬಹುದೆಂದು ಸಮೀಕ್ಷೆಗಳು ಹೇಳಿದ್ದರೂ, ಅಂಥದು ಏನಾಗಿಲ್ಲ. ಕೇರಳದಲ್ಲಿ ಎಲ್​ಡಿಎಫ್ ಸತತ ಎರಡನೆ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ದಾಖಲೆ ಮಾಡಿದೆ. ತಮಿಳುನಾಡು ಬಿಟ್ಟರೆ ಉಳಿದೆಡೆ ಕಾಂಗ್ರೆಸ್​ಗೆ ಕಹಿಯೇ ಸಿಕ್ಕಿದೆ. ಬಿಜೆಪಿಗೂ ಕೆಲವೆಡೆ ಅಂದುಕೊಂಡಿದ್ದನ್ನು ಸಾಧಿಸಲು ಆಗಿಲ್ಲ. ಆ ಪಕ್ಷಕ್ಕೆ ಕರ್ನಾಟಕದ ಬೆಳಗಾವಿಯಲ್ಲಿ ಕಡಿಮೆ ಅಂತರದಿಂದ ಜಯ ಲಭಿಸಿದೆ. ನೆಲೆ ಇರುವಲ್ಲಿ ಪ್ರಾದೇಶಿಕ ಪಕ್ಷಗಳ ಪಾರಮ್ಯ ಮುಂದುವರಿದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅವಿಭಾಜ್ಯ ಅಂಗ. ಚುನಾವಣೆ ಎಂದಮೇಲೆ ಒಂದುಹಂತಕ್ಕೆ ಹೋರಾಟದ ತುರುಸು, ತಂತ್ರ-ಪ್ರತಿತಂತ್ರಗಳು, ಎಲ್ಲೆ ಮೀರದ ಮಾತಿನ ಚಕಮಕಿ ಇವೆಲ್ಲ ಇರಬೇಕಾಗುತ್ತದೆ. ಆದರೆ ಯಾವಾಗ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗುತ್ತದೆಯೋ ಆಗಿನಿಂದ ಎಲ್ಲ ಪಕ್ಷಗಳೂ ಪರಸ್ಪರ ವೈಮನಸ್ಯ ಬದಿಗಿಟ್ಟು ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದು ಜನರ ನಿರೀಕ್ಷೆ. ಭಾರತ ಈಗ ಕರೊನಾ ಮಹಾಮಾರಿಯ ಎರಡನೆಯ ಅಲೆಯ ಸಂಕಷ್ಟದ ಸ್ಥಿತಿಯಲ್ಲಿದೆ. ದಿನನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ; ಸಾವಿನ ಪ್ರಮಾಣ ಕೂಡ ಮೊದಲನೆಯ ಅಲೆಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಈಗ ಹೊಸದಾಗಿ ಅಧಿಕಾರಕ್ಕೆ ಬರುತ್ತಿರುವವರು ಹಾಗೂ ಕೇಂದ್ರ ಸರ್ಕಾರ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕರೊನಾ ನಿಯಂತ್ರಣವನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕಿದೆ. ಕರೊನಾ ಲಸಿಕೆ ನೀಡುವ ಕಾರ್ಯಕ್ಕೆ ವೇಗ ನೀಡಬೇಕಿದೆ. ಇದರ ಜತೆಗೆ, ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಹೊಸ ಹೊಸ  ಆಲೋಚನೆಗಳ ಅಗತ್ಯವಿದೆ. ಆಡಳಿತ ನಡೆಸುವವರು ಮತ್ತು ವಿಪಕ್ಷಗಳವರು ಜತೆಯಾಗಿ ಈ ಜವಾಬ್ದಾರಿ ನಿರ್ವಹಿಸಬೇಕಾದುದು ಸದ್ಯದ ತುರ್ತು ಎಂಬುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net