

ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕತೆಯ ಹೊಸ ಪ್ರಕರಣ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದ ರಿಂದ ಕಳವಳ ಸೃಷ್ಟಿಯಾಗಿದೆ. ಗುರುವಾರ 13,313 ಹೊಸ ಕೇಸ್ ದಾಖಲಾಗಿದ್ದು 38 ಜನರು ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 83,990ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣದಲ್ಲಿ ಮಹಾರಾಷ್ಟ್ರ ಮತ್ತು ಕೇರಳದ ಪಾಲೇ ಶೇಕಡ 60ರಷ್ಟಿದೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,33,44,958 ಹಾಗೂ ಮೃತರ ಸಂಖ್ಯೆ 5,24,941ಕ್ಕೆ ಏರಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 2.03 ಹಾಗೂ ಸಾಪ್ತಾಹಿಕ ದರ ಶೇಕಡ 2.81ಕ್ಕೆ ಏರಿದೆ. ಇದುವರೆಗೆ ದೇಶದಾದ್ಯಂತ 196.62 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ದೆಹಲಿ, ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಏರುತ್ತಿರುವುದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
2 ತಿಂಗಳು ಸೋಂಕಿನ ಕಾಟ: ಮಕ್ಕಳಲ್ಲಿ ದೀರ್ಘಾವಧಿಯ ಸೋಂಕು ಕಾಣಿಸಿಕೊಂಡರೆ ಅದರ ಲಕ್ಷಣಗಳು ಎರಡು ತಿಂಗಳವರೆಗೆ ಮುಂದುವರಿಯಬಹುದು ಎಂದು ದಿ ಲ್ಯಾನ್ಸೆಟ್ ಚೈಲ್ಡ್ ಅಂಡ್ ಎಡೊಲೆಸೆಂಟ್ ಹೆಲ್ತ್ ಜರ್ನಲ್ ಗುರುವಾರ ಪ್ರಕಟಿಸಿದ ಅಧ್ಯಯನ ವರದಿಯೊಂದು ಹೇಳಿದೆ. 14 ವರ್ಷ ವರೆಗಿನ ಮಕ್ಕಳಲ್ಲಿ ಇದುವರೆಗೆ ನಡೆಸಲಾದ ಅತಿ ದೊಡ್ಡದೆನಿಸಿದ ಈ ಅಧ್ಯಯನಕ್ಕೆ ಡೆನ್ಮಾರ್ಕ್ನ ಮಕ್ಕಳಿಂದ ಸಂಗ್ರಹಿಸಿದ ಸ್ಯಾಂಪಲ್ ಬಳಸಲಾಗಿತ್ತು. ಪಾಸಿಟಿವ್ ಕೇಸ್ಗಳನ್ನು ಹಿಂದೆ ಕರೊನಾ ಸೋಂಕು ಇಲ್ಲದಿದ್ದ ನಿಯಂತ್ರಣ ಗುಂಪಿನವರೊಂದಿಗೆ ಸರಿಹೊಂದಿಸಲಾಗಿತ್ತು ಎಂದು ಡೆನ್ಮಾರ್ಕ್ನ ಕೋಪನ್ಹೇಗನ್ ಯುನಿವರ್ಸಿಟಿ ಹಾಸ್ಪಿಟಲ್ನ ಪ್ರೊಫೆಸರ್ ಸೆಲಿನಾ ಕಿಕ್ಕೆನ್ಬೋರ್ಗ್ ಬರ್ಗ್ ಹೇಳಿದ್ದಾರೆ.
ಅಮೆರಿಕದಲ್ಲಿ ಮಂಕಿಪಾಕ್ಸ್ ಹಾವಳಿ: ಅಮೆರಿಕದಲ್ಲಿ ಮಂಕಿಪಾಕ್ಸ್ (ಮಂಗನ ಸಿಡುಬು) ಕಾಯಿಲೆ ಹೆಚ್ಚುತ್ತಿರುವುದರಿಂದ ರೋಗ ಪತ್ತೆ ಪರೀಕ್ಷೆಯನ್ನು ಅಧಿಕಗೊಳಿಸಲು ಜೋ ಬೈಡೆನ್ ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಪರೀಕ್ಷೆಗೆ ಅನುಕೂಲವಾಗುವಂತೆ ಪರೀಕ್ಷೆಯನ್ನು ಖಾಸಗಿ ಪ್ರಯೋಗಾಲಯಗಳಿಗೂ ವಹಿಸಲಾಗಿದೆ. ಅಮೆರಿಕದಲ್ಲಿ ಇದುವರೆಗೆ ಮಂಕಿಪಾಕ್ಸ್ನ 142 ಪ್ರಕರಣಗಳು ದೃಢಪಟ್ಟಿವೆ. ಸ್ಯಾಂಪಲ್ಗಳನ್ನು ಖಾಸಗಿ ಲ್ಯಾಬ್ಗಳಿಗೂ ಕಳಿಸುವುದರಿಂದ ಮಂಕಿಪಾಕ್ಸ್ ಪರೀಕ್ಷೆಯ ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಲಿದೆ ಎಂದು ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಅಭಿಪ್ರಾಯ ಪಟ್ಟಿದೆ. ಇದಕ್ಕೂ ಮುನ್ನ ಸರ್ಕಾರಿ ಲ್ಯಾಬ್ಗಳು ಮಾತ್ರ ಪರೀಕ್ಷೆ ನಡೆಸುತ್ತಿದ್ದವು. ವಾರದಲ್ಲಿ ಒಟ್ಟು ಸುಮಾರು 8,000 ಸ್ಯಾಂಪಲ್ ಪರೀಕ್ಷೆ ನಡೆಸುವ ಸಾಮರ್ಥ್ಯವಷ್ಟೇ ಅವುಗಳಿಗೆ ಇದೆ. ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಪ್ರತಿಯೊಬ್ಬ ಅಮೆರಿಕನ್ನರು ಕಳವಳ ಪಡಬೇಕು ಎಂದು ಆರೋಗ್ಯ, ಮಾನವ ಸೇವೆಗಳ ಕಾರ್ಯದರ್ಶಿ ಝೇವಿಯರ್ ಬೆಸೆರಾ› ಹೇಳಿದ್ದಾರೆ. ಮಂಕಿಪಾಕ್ಸ್ ಕಾಯಿಲೆಯು 20ನೇ ಶತಮಾನದಲ್ಲಿ ಜಗತ್ತನ್ನು ಬಹಳವಾಗಿ ಕಾಡಿದ್ದ ಚಿಕನ್ಪಾಕ್ಸ್ ಕುಟುಂಬಕ್ಕೇ ಸೇರಿದ್ದಾಗಿದೆ.
10 ರಾಜ್ಯಗಳಲ್ಲಿ ಸಾವಿರ ಸಕ್ರಿಯ ಕೇಸ್: ಸದ್ಯಕ್ಕೆ ಮಹಾರಾಷ್ಟ್ರ, ಕೇರಳ, ದೆಹಲಿ, ಕರ್ನಾಟಕ, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ಬಂಗಾಳ ಮತ್ತು ಗುಜರಾತ್ ಸಹಿತ ಹತ್ತು ರಾಜ್ಯಗಳಲ್ಲಿ ತಲಾ 1,000ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ.
ಕರೊನಾ ವೈರಸ್ನ ಯಾವುದಾದರೂ ಹೊಸ ರೂಪಾಂತರಿ ಸೃಷ್ಟಿಯಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪರಿಸ್ಥಿತಿ ಮೇಲೆ ತೀವ್ರ ನಿಗಾ ಇರಿಸಬೇಕು ಹಾಗೂ ಸಂಪೂರ್ಣ ವಂಶವಾಹಿನಿ ಪರೀಕ್ಷೆ (ಡಬ್ಲ್ಯುಜಿಎಸ್) ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದೇಶದಲ್ಲಿ ಸೋಂಕು ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಅಧಿಕ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಹಾಗೂ ಸಾಕಷ್ಟು ಪರೀಕ್ಷೆಗಳನ್ನು ನಡೆಸಬೇಕೆಂದು ಸೂಚಿಸಿದರು. ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಜಾಸ್ತಿಯಾಗಿ ನಡೆಸುವುದು ಅಗತ್ಯ ಎಂದು ಪ್ರತಿಪಾದಿಸಿದರು. ಅಧಿಕ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆಯೂ ಅಧಿಕಾರಿಗಳಿಗೆ ಸಲಹೆ ಮಾಡಿದರು. ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಸೋಂಕಿನ ಜಾಗತಿಕ ಏರಿಕೆ ಪ್ರವೃತ್ತಿ ಬಗ್ಗೆ ಸಭೆಗೆ ವಿವರಣೆ ನೀಡಿದರು.