ಆಧ್ಯಾತ್ಮ ಜೀವನದ ಪಂಚ ಮಾರ್ಗಗಳು

Ramakrishna paramahamsa
Published on
ಪರಮಹಂಸ ನುಡಿದೀಪ
ಸಾಮಾನ್ಯವಾಗಿ ಅಧ್ಯಾತ್ಮ ಎಂದಾಕ್ಷಣ ಸರ್ವೇ ಸಾಮಾನ್ಯವಾಗಿ ಅದು ನಮಗಲ್ಲ, ಪುಣ್ಯ ಪುರುಷರಿಗೆ ಇತ್ಯಾದಿ ಭಾವನೆಗಳು. ಎಲ್ಲಿಯೂ ಅತ್ಯಂತ ಸರಳ ಹಾಗೂ ಸುಲಭ ಮಾರ್ಗದ ಅಧ್ಯಾತ್ಮ ಚಿಂತನೆಗಳು, ಭೋಧನೆಗಳು ಕಾಣಸಿಗುತ್ತಿಲ್ಲ. ಬದಲಾಗಿ ಅಧ್ಯಾತ್ಮವೆಂದರೆ ಯಾವುದೋ ಅತ್ಯಂತ ಕ್ಲಿಷ್ಟವಾದ, ಕಗ್ಗಂಟಾದ ಅಗೋಚರ ವಿಚಾರ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಅದ್ಭುತ ಆಧ್ಯಾತ್ಮಿಕ ಪ್ರಗತಿಯ ಹಾದಿಯನ್ನು ವಿವರಿಸಿದ್ದಾರೆ. ಏನೇ ಕಾರ್ಯ ಮಾಡು, ಜವಾಬ್ಧಾರಿಯನ್ನು ಪಡೆ, ಕರ್ತವ್ಯವನ್ನು ಕೈಗೊಳ್ಳುವಂತಾದರೂ ಜೀವನದಲ್ಲಿ ದಿವ್ಯತೆ, ಪಾವಿತ್ರ್ಯ, ಸಾರ್ಥಕತೆಯನ್ನು ಪಡೆಯುವಂತಾಗಬೇಕು. ಇದು ಎಲ್ಲರಿಗೂ ಸಾಧ್ಯ ಎಂಬುದನ್ನು ಪದೇ ಪದೇ ಬೋಧಿಸುತ್ತ ಸುಪ್ತ ಚೈತನ್ಯವನ್ನು ಸ್ಪುರಣಗೊಳಿಸುವ ವಿಧಾನ ಅತಿ ಸುಲಭ, ಸರಳ ಹಾಗೂ ಸರ್ವರಿಗೂ ಸಾಧ್ಯ ಎಂಬುದನ್ನು ತಮ್ಮ ಅಪಾರ ಸಾಧನೆಯ ಅನುಭವದಿಂದ ಮಾರ್ಗದರ್ಶನ ನೀಡಿದ್ದಾರೆ. ಈ ಅನುಭವ ವಾಣಿಗಳನ್ನು ಶ್ರೀ ರಾಮಕೃಷ್ಣ ವಚನವೇದ ಎಂಬ ಗ್ರಂಥದಲ್ಲಿ ಕಾಣಬಹುದು.

ಸಾಮಾನ್ಯವಾಗಿ ರಾಮಕೃಷ್ಣ ಪರಮಹಂಸರ ಅತ್ಯಮೋಘವಾದ ಸಂದೇಶವೆಂದರೆ ಜೀವನದ ಮುಖ್ಯ ಉದ್ದೇಶವೇ ಭಗವಂತನನ್ನು ಅರಿಯುವುದು ಎನ್ನುವುದಾಗಿದೆ. ಹಾಗಾದರೆ ಈ ವಿಚಾರವನ್ನು ಮತ್ತೂ ನಿಖರವಾಗಿ ಅರಿಯಲು ಪ್ರಯತ್ನಿಸೋಣ.

ಈ ಜಗತ್ತಿನ ಮನುಜರಿಗೆ ಅತಿ ಸುಲಭವಾದ ಪಂಚತತ್ತ್ವಗಳನ್ನು ದಯಪಾಲಿಸಿ ಕೋಟಿ ಕೋಟಿ ಮನುಜರ ಜೀವನ ಉಜ್ಜೀವನದೆಡೆಗೆ ಸಾಗುವಂತಾಗಿಸಿದ ಈ ತತ್ತ್ವಗಳಾವವು?ಒಂದು ಉದಾಹರಣೆ.

ಅದೊಂದು ದಿನ ಎಂದಿನಂತೆ ಮಾಸ್ಟರ್ ಮಹೇಂದ್ರನಾಥಗುಪ್ತ ಪರಮಹಂಸರಲ್ಲಿ ಸದಸದ್ವಿಚಾರದ ಸಂಭಾಷಣೆ ನಡೆಸುತ್ತಿರುವಾಗ ಈ ಪ್ರಶ್ನೆಯನ್ನು ಅತ್ಯಂತ ವಿನಯಪೂರ್ವಕವಾಗಿ ಕೇಳುತ್ತಾನೆ.

‘ಏನು ಮಾಡಿದರೆ ಭಗವಂತನತ್ತ ಮನಸ್ಸನು ಹರಿಸಬಹುದು?’

ರಾಮಕೃಷ್ಣರು ಈ ಪ್ರಶ್ನೆಗೆ ಹೇಗೆ ಸರಳವಾಗಿ ಗಹನವಾದ ಅಂಶಗಳನ್ನು ಬೋಧಿಸುತ್ತಾರೆ: ಭಗವಂತನ ನಾಮಗುಣ ಕೀರ್ತನೆಯನ್ನು ಸರ್ವದಾ ಮಾಡುತ್ತಿರಬೇಕು. ಸತ್ಸಂಗ ಎಂದರೆ ಸಾಧು ಸತ್ಪುರುಷರ ಸಹವಾಸ, ಸಾನ್ನಿದ್ಯವನ್ನು ಆಗಾಗ ಮಾಡುತ್ತಿರಬೇಕು. ಮನಸ್ಸು ಹಗಲಿರುಳೂ ಪ್ರಾಪಂಚಿಕತೆಯಲ್ಲಿಯೇ, ಬಾಹ್ಯ ಕೆಲಸ ಕಾರ್ಯಗಳಲ್ಲಿಯೇ ನಿರತವಾಗಿಬಿಟ್ಟಿದ್ದರೆ ಅದು ಭಗವನ್ಮುಖವಾಗಲಾರದು. ಆಗಾಗ ನಿರ್ಜನ ಪ್ರದೇಶ, ಶಾಂತಿ ಕ್ಷೇತ್ರಗಳಿಗೆ ಹೋಗಿ ಭಗವದ್ ಧ್ಯಾನದಲ್ಲಿ ತೊಡಗುವುದು ಅತ್ಯಂತ ಆವಶ್ಯಕ. ಮೊದಮೊದಲು ಪದೇ ಪದೇ ನಿರ್ಜನ ಪ್ರದೇಶಕ್ಕೆ ಹೋಗಿ ಭಗವಂತನ ಧ್ಯಾನ, ಜಪ ಮಾಡದೆ ಇದ್ದರೆ ಮನಸ್ಸನ್ನು ಹತೋಟಿಗೆ ತರುವುದು ದುಸ್ಸಾಧ್ಯ. ಗಿಡ ಇನ್ನೂ ಸಸಿಯಾಗಿರುವಾಗ ಅದರ ಸುತ್ತಲೂ ಬೇಲಿ ಕಟ್ಟಬೇಕು; ಇಲ್ಲದಿದ್ದರೆ ದನಕರುಗಳು, ಆಡು ಕುರಿಗಳು ತಿಂದು ನಾಶ ಮಾಡಿಬಿಡುತ್ತವೆ. ಧ್ಯಾನವನ್ನು ಆಂತರ್ಯದಲ್ಲಿ, ಏಕಾಂತ ಪ್ರದೇಶದಲ್ಲೋ, ನಿಬಿಡ ಕಾನನದಲ್ಲಿಯೋ ಕೈಗೊಳ್ಳಬೇಕು. ಸತತ ಸದಸದ್ವಿಚಾರ ಮಾಡುತ್ತಿರಬೇಕು. ಭಗವಂತನೊಬ್ಬನೇ ಸತ್, ನಿತ್ಯ ವಸ್ತು; ಉಳಿದದ್ದೆಲ್ಲಾ ಅಸತ್, ಅನಿತ್ಯ ಎಂದು ಅರಿಯಬೇಕು. ಹೀಗೆ ವಿಚಾರ ಮಾಡುತ್ತಾ ಅನಿತ್ಯ ವಸ್ತುಗಳ ಮೇಲಿನ ಅನುರಾಗವನ್ನು ಕೊನೆಗೆ ಮನಸ್ಸಿನಿಂದ ಕಿತ್ತೊಗೆಯಬೇಕು.

ಹಾಗಾದರೆ ಪ್ರಪಂಚದಲ್ಲಿ ಯಾವ ರೀತಿಯಾಗಿ ಇರಬೇಕು?. ಇದಕ್ಕೆ ರಾಮಕೃಷ್ಣರ ಉತ್ತರ ಹೀಗಿದೆ: ಎಲ್ಲಾ ಕೆಲಸ ಕಾರ್ಯಗಳನ್ನು ಮಾಡು, ಆದರೆ ಮನಸ್ಸನ್ನು ಭಗವಂತನ ಪಾದಪದ್ಮಗಳಲ್ಲಿ ಅರ್ಪಿಸು. ಈ ಪಂಚತತ್ತ್ವಗಳಲ್ಲಿ ಮೊದಲನೆಯದು ಭಗವನ್ನಾಮ ಸ್ಮರಣೆ, ಜಪ, ಚಿಂತನೆ, ಇತ್ಯಾದಿ. ಎರಡನೆಯದು ಸತ್ಸಂಗ - ದೇವಾಲಯಗಳಲ್ಲಿ ನಡೆಯುತ್ತಿದ್ದ ಹರಿಕಥೆ, ಗಮಕ, ಪುರಾಣ ವಾಚನ ಇತ್ಯಾದಿಗಳು. ಇನ್ನು ಮೂರನೇ ಅಂಶವೇ ನಿರ್ಜನ ಪ್ರದೇಶ, ಶಾಂತಿ ಕ್ಷೇತ್ರ, ಪವಿತ್ರ ಧಾಮಗಳಿಗೆ ತೆರಳಿ ಭಗವದ್ ಚಿಂತನೆ, ಧ್ಯಾನ, ಸ್ಮರಣೆ ನಡೆಸುವುದು. ನಾಲ್ಕನೆಯದು ಸತತವಾಗಿ ಅಧ್ಯಾತ್ಮಿಕ ಚಿಂತನ-ಮಂಥನ. ಅದರಿಂದ ಈ ನಶ್ವರ ಪ್ರಪಂಚದ ಸತ್ಯ-ಅಸತ್ಯದ ಅರಿವು ಉಂಟಾಗುತ್ತದೆ. ನಶ್ವರ ಜಗತ್ತಿನಿಂದ ಮನಸ್ಸು ದೂರವಾಗುತ್ತ ಈಶ್ವರ ಭಾವನೆಯನ್ನು ಹೊಂದುವಂತಾಗುತ್ತದೆ. ಐದನೇಯ ತತ್ವವೆಂದರೆ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡು, ಆದರೆ ಮನಸ್ಸು ಮಾತ್ರ ಭಗವಂತನ ಚರಣಾರವಿಂದಗಳಲ್ಲಿ ಸಂಪೂರ್ಣ ಸಮರ್ಪಿತವಾಗುವಂತೆ ನಡೆ. ಯಾವ ಕೆಲಸವೂ ನಿನ್ನದಲ್ಲ, ಅದು ನಿನಗೆ ಸಂದ ಕರ್ತವ್ಯ ಮಾತ್ರ. ಆದಾಗ್ಯೂ ಆ ಕೆಲಸಕಾರ್ಯಗಳನ್ನು ಭಗವರ್ದಪಿತ ಭಾವನೆಯಿಂದ ಪೂರ್ಣಗೊಳಿಸು. ಆ ಭಾವನೆಯಿಂದ ಕೈಗೊಂಡಿದ್ದಲ್ಲಿ ಕೆಲಸ ಕಾರ್ಯಗಳ ಕಷ್ಟ ನಿನಗೆ ಅಂಟುವುದಿಲ್ಲ. ನೀನು ಕೇವಲ ಯಂತ್ರ, ಯಂತ್ರೀ ಭಗವಂತ.

ತಾವರೆ ಎಲೆಯ ಮೇಲಿನ ನೀರಿನಂತೆ ಜೀವಿಸಬೇಕಾದಲ್ಲಿ ಪರಮಹಂಸರ ಈ ಅದ್ಭುತ ಪಂಚ ತತ್ತ್ವಗಳನ್ನು ಪರಿಪಾಲಿಸಬೇಕು.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net