ಛತ್ತೀಸ್​ಗಢದಲ್ಲಿ ಐವರು ನಕ್ಸಲರ ಬಂಧನ

Naxals 11 FEB 20
Published on

ದಾಂತೇವಾಡ: ಒಬ್ಬ ಅಪ್ರಾಪ್ತ ಸೇರಿ ಐವರು ನಕ್ಸಲರನ್ನು ಛತ್ತೀಸ್​ಗಢದ ದಾಂತೇವಾಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಮೀಸಲು ರಕ್ಷಣಾದಳ, ಕೇಂದ್ರೀಯ ಮೀಸಲು ಪೊಲೀಸ್​ ಪಡೆ, ಸ್ಥಳೀಯ ಪೊಲೀಸರ ತಂಡ ಸೋಮವಾರ ಚಿಕ್​ಪಾಲ್​, ಬಡೇಗದಮ್​, ತೇಲಂ, ತೇಟಂ ಗ್ರಾಮಗಳಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ತೇಟಂ ಗ್ರಾಮದಲ್ಲಿ ಈ ಶಂಕಿತರು ರಕ್ಷಣಾ ಪಡೆಗೆ ಸಿಕ್ಕಿಬಿದ್ದು, ಪರಾರಿಯಾಗಲು ಯತ್ನಿಸಿದ್ದರು. ಆದಾಗ್ಯೂ, ಎಲ್ಲರನ್ನೂ ಬಂಧಿಸುವಲ್ಲಿ ರಕ್ಷಣಾ ಪಡೆ ಯಶಸ್ವಿಯಾಗಿದೆ.

ಬಂಧಿತರನ್ನು ರಾಹುಲ್ ಮರ್ಕಂ(22), ಬಮನ್ ಮರ್ಕಂ(19), ಮಂಗಲ್ ಮಾಧ್ವಿ(20), ಮಂಗು ಮಾಧ್ವಿ (40) ಮತ್ತು ಒಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದೆ. ಜನ್​ ಮಿಲಿಟಿಯಾ ಎಂಬ ಮಾವೋವಾದಿ ಬಣದ ಸಕ್ರಿಯ ಕಾರ್ಯಕರ್ತರು ಇವರು. ತೇಟಂ ಗ್ರಾಮದಲ್ಲಿ ಜನವರಿ 31ರಂದು ಪಂಚಾಯಿತಿ ಚುನಾವಣೆ ನಡೆದಾಗ ಸಂಭವಿಸಿದ್ದ ಐಇಡಿ(ಇಂಪ್ರೂವೈಸ್ಡ್​ ಎಕ್ಸ್​ಪ್ಲೋಸಿವ್ ಡಿವೈಸ್) ಸ್ಫೋಟದಲ್ಲಿ ಇವರ ಕೈವಾಡ ಇದೆ. ಈ ಸ್ಫೋಟದಲ್ಲಿ ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದರು.

ಈ ಪ್ರದೇಶದಲ್ಲಿ ಮಾವೋವಾದಿ ಸಂಬಂಧಿತ ಪ್ರಚಾರ ಕಾರ್ಯ, ರಸ್ತೆ ತಡೆ, ರಕ್ಷಣಾ ಪಡೆಗಳ ದಾರಿ ತಪ್ಪಿಸುವುದು, ಐಇಡಿ ಮುಂತಾದ ಸ್ಫೋಟಕಗಳನ್ನು ಇಡುವುದು ಮುಂತಾದ ಹೊಣೆಗಾರಿಕೆ ಈ ತಂಡಕ್ಕೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net