ಫ್ರೀಯಾಗಿ ಡ್ರಾಪ್​ ಕೊಡುತ್ತೇವೆ ಎನ್ನುತ್ತಿದ್ದರು; ದರೋಡೆ ಮಾಡಿ ರಸ್ತೆಗೆ ದೂಡಿ ಪರಾರಿಯಾಗುತ್ತಿದ್ದರು

drop
Published on

ನವದೆಹಲಿ: ಯಾರೋ ಅಪರಿಚಿತರು ಡ್ರಾಪ್​ ಕೊಡುತ್ತೇವೆಂದಾಕ್ಷಣ ಹತ್ತಿ ಕುಳಿತುಬಿಡಬಾರದು ಎಂದು ತಿಳಿದವರು ಹೇಳುತ್ತಿರುತ್ತಾರೆ. ಆದರೂ ಕೆಲವೊಮ್ಮೆ ಅರ್ಜೆಂಟಿನಲ್ಲಿದ್ದೇವೆ ಎಂದು ಅಪರಿಚಿತರ ಡ್ರಾಪ್​ಗೂ ಓಕೆ ಎಂದು ಬಿಡುತ್ತೇವೆ. ಅದೇ ರೀತಿ ಅರ್ಜೆಂಟಿನಲ್ಲಿರುವ ಜನರಿಗೆ ಮೋಸ ಮಾಡುತ್ತಿದ್ದ ಗ್ಯಾಂಗ್​ ಒಂದು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಐದು ಜನರ ಗ್ಯಾಂಗ್​ ಒಂದರದ್ದು ಡ್ರಾಪ್​ ಮಾಡುವುದೇ ಕೆಲಸವಾಗಿತ್ತು. ಓರ್ವ ಮಹಿಳೆಯೂ ಇದ್ದ ಆ ಗ್ಯಾಂಗ್​ ನೋಯ್ಡಾ ಮತ್ತು ಗ್ರೇಟರ್​ ನೋಯ್ಡಾ ಭಾಗದಲ್ಲಿ ಬಸ್ಸು, ಟ್ಯಾಕ್ಸಿ, ಆಟೋಗಾಗಿ ಕಾಯುತ್ತಿದ್ದ ಜನರನ್ನು ಟಾರ್ಗೆಟ್​ ಮಾಡುತ್ತಿತ್ತು. 'ನಾವೂ ಆ ಕಡೆಯೇ ಹೋಗುತ್ತಿದ್ದೇವೆ. ಬನ್ನಿ ಅಲ್ಲೇ ಡ್ರಾಪ್​ ಮಾಡುತ್ತೇವೆ' ಎಂದು ಹೇಳಿ ಒಬ್ಬಂಟಿಗರನ್ನು ಕಾರಿನಲ್ಲಿ ಕುರಿಸಿಕೊಂಡು ಹೋಗುತ್ತಿದ್ದರು. ಸ್ವಲ್ಪ ದೂರ ಹೋದ ನಂತರ ಚಾಕು ತೋರಿಸಿ ಅವರ ಬಳಿ ಇದ್ದ ಎಲ್ಲ ಮೌಲ್ಯಯುತ ವಸ್ತುವನ್ನು ದರೋಡೆ ಮಾಡಿ, ಅವರನ್ನು ರಸ್ತೆಗೆ ದೂಡಿ ಪರಾರಿಯಾಗುತ್ತಿದ್ದರು.

ಈ ಗ್ಯಾಂಗ್​ ಹಲವು ತಿಂಗಳಿನಿಂದ ಈ ರೀತಿಯ ದರೋಡೆ ಮಾಡುತ್ತಾ ಬಂದಿದೆ. ಈ ವಿಚಾರವಾಗಿ ಅನೇಕ ದೂರು ಪಡೆದಿದ್ದ ಪೊಲೀಸರು ಗ್ಯಾಂಗ್​ನ್ನು ಹಿಡಿಯಲು ಬಲೆ ಬೀಸಿದ್ದಾರೆ. ಸೆಕ್ಟರ್​ 121ರ ಕ್ಲಿಯೊ ಕೌಂಟಿ ಸೊಸೈಟಿ ಬಳಿ ಅವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 11 ಮೊಬೈಲ್​ ಫೋನ್​ಗಳು, 6 ಎಟಿಎಂಗಳು, ಚಿನ್ನದ ಸರ, ಪಿಸ್ತೂಲು ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಅಂಕುಶ್​ ಕುಮಾರ್​, ಆಕಾಶ್​ ಕೊಹ್ಲಿ, ರಂಜನ್​ ಸರ್ಕಾರ್, ರಾಹುಲ್​ ಕುಮಾರ್​ ಮತ್ತು ಸ್ವಪ್ನಾ ಸಿಂಗ್​ ಎಂದು ಗುರುತಿಸಲಾಗಿದೆ. ವಂಚನೆ ಮತ್ತು ದರೋಡೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ ವಿಭಾಗಗಳ ಅಡಿಯಲ್ಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net