ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಪತಿ ಶವವಾದ

murder
Published on

ಲಖನೌ: ಹೆಂಡತಿಗೆ ಆರೋಗ್ಯ ಸರಿಯಿಲ್ಲವೆಂದು ಆಸ್ಪತ್ರೆಗೆ ಕರೆದೊಯ್ದ ಪತಿಯೇ ಶವವಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಸದ್ಯ ಈ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

25 ವರ್ಷದ ರಶೀದ್​ ಮಣ್ಣು ವ್ಯಾಪಾರಿಯಾಗಿದ್ದು, ತನ್ನ ಪತ್ನಿಗೆ ಹುಷಾರಿಲ್ಲದ ಕಾರಣ ಶುಕ್ರವಾರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆಸ್ಪತ್ರೆಗೆ ತಲುಪಿದ ನಂತರ ಆತನಿಗೆ ಯಾರಿಂದಲೋ ಕರೆ ಬಂದಿದೆ. ಕರೆ ಸ್ವೀಕರಿಸಿದ ಆತ ಆದಷ್ಟು ಬೇಗ ವಾಪಾಸು ಬರುವುದಾಗಿ ಪತ್ನಿಗೆ ಹೇಳಿ ಹೊರಟಿದ್ದಾನೆ. ಸಂಜೆ ಕಾರಿನಲ್ಲಿ ಆಸ್ಪತ್ರೆ ಆವರಣದಿಂದ ಹೊರಬಿದ್ದ ಆತ ನಂತರ ಪತ್ತೆಯಾಗಿಲ್ಲ. ಆತನ ಪತ್ನಿ ಎಷ್ಟೇ ಬಾರಿ ಕರೆ ಮಾಡಿದರೂ ಅತ ಮಾತನಾಡಲು ಸಿಕ್ಕಿಲ್ಲ. ಈ ವಿಚಾರವಾಗಿ ಆತನ ಕುಟುಂಬ ಮುಸ್ಸೂರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದೆ.

ಶನಿವಾರ ಬೆಳಗ್ಗೆ ರಶೀದ್​ನ ಕಾರು ಮತ್ತು ಆತನ ಮೃತ ದೇಹ ಪತ್ತೆಯಾಗಿದೆ. ದಸ್ನಾ ನಗರದ ಬಳಿ ರಸ್ತೆಯೊಂದರಲ್ಲಿ ಈತನ ಕಾರು ಪತ್ತೆಯಾಗಿದೆ. ಡ್ರೈವರ್​ ಸೀಟಿನಲ್ಲಿ ರಶೀದ್​ ಮೃತ ದೇಹವಿದೆ. ಮೃತದೇಹವೆನ್ನುವುದು ಗೊತ್ತಾಗದಿರುವಂತೆ ವ್ಯವಸ್ಥಿತವಾಗಿ ದೇಹವನ್ನು ಕೂರಿಸಲಾಗಿದೆ. ಮುಖಕ್ಕೆ ಮಾಸ್ಕ್​ ಹಾಕಿ ಗುರುತು ಸಿಗದಿರುವಂತೆ ಮಾಡಲಾಗಿದೆ. ಅನುಮಾನ ಬಂದ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಇದು ರಶೀದ್​ ಮೃತ ದೇಹವೆನ್ನುವುದು ಗೊತ್ತಾಗಿದೆ.

ರಶೀದ್​ಗೆ ಶುಕ್ರವಾರ ಸಂಜೆ ಕರೆ ಮಾಡಿದವರು ಯಾರು? ಕೊಲೆ ಮಾಡಿದ ಕಾರಣವೇನು ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net