30 ಸಾವಿರಕ್ಕಾಗಿ ಪೂರ್ತಿ ಕುಟುಂಬವನ್ನೇ ಕೊಂದರು: ಅಷ್ಟಕ್ಕೂ ಈ ಕೊಲೆ ಮಾಡಿದ್ದು ಯಾರು ಗೊತ್ತಾ?

dehli
Published on

ನವದೆಹಲಿ: ಮೂರು ಮಕ್ಕಳು ಸೇರಿ ದಂಪತಿಗಳ ಮೃತ ದೇಹವು ನಿನ್ನೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ಈ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದ್ದು ದುಡ್ಡಿನ ವಿಚಾರವಾಗಿ ಸಂಬಂಧಿಕರೇ ಈ ಕುಟುಂಬವನ್ನು ಕೊಂದಿದ್ದಾರೆ ಎನ್ನುವುದು ಬಹಿರಂಗವಾಗಿದೆ.

ನಿನ್ನೆ (ಫೆ.12) ದೆಹಲಿಯ ಭಜನ್​ಪುರದಲ್ಲಿರುವ ಶಂಭು ಚೌಧರಿ ಹೆಸರಿನ ವ್ಯಕ್ತಿಯ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಮನೆಯ ಬಾಗಿಲು ಮುರಿದು ನೋಡಿದಾಗ ಐದು ಮೃತ ದೇಹಗಳು ಪತ್ತೆಯಾಗಿದ್ದವು. ಕೊಳೆತ ಸ್ಥಿತಿಯಲ್ಲಿದ್ದ ಆ ಮೃತದೇಹಗಳನ್ನು ಶಂಭು ಚೌಧರಿ (43), ಸುನಿತಾ (37), ಶಿವಂ (17), ಸಚಿನ್​ (14) ಮತ್ತು ಕೋಮಲ್​ (12) ಎಂದು ಗುರುತಿಸಲಾಗಿತ್ತು. ಮೇಲ್ನೋಟಕ್ಕೆ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಂಡುಬಂದಿತ್ತು. ಆದರೆ ತನಿಖೆ ನಡೆಸುತ್ತಿರುವ ಪೊಲೀಸರು ಇಂದು ಪ್ರಕರಣದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಆಟೋ ರಿಕ್ಷಾ ಚಾಲಕನಾಗಿರುವ ಶಂಭು ತನ್ನ ಸಂಬಂಧಿಯೊಬ್ಬರಿಂದ 30,000 ರೂಪಾಯಿ ಸಾಲ ಪಡೆದಿದ್ದ. ಆತ ಸಾಲ ಪಡೆದಿದ್ದಾನೆಂಬ ಕಾರಣದಿಂದಲೇ ಆತನ ಸಂಬಂಧಿ ಶಂಭುವಿನ ಪೂರ್ತಿ ಕುಟುಂಬವನ್ನೇ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಂಭುವಿನ ಮಕ್ಕಳು ಹತ್ತಿರದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಫೆ.4ರಿಂದ ಶಾಲೆಗೆ ಹೋಗಿಲ್ಲವೆನ್ನುವುದು ಶಾಲೆಯ ದಾಖಲಾತಿಯಿಂದಾಗಿ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net