

ನವದೆಹಲಿ: ಫೆ.24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪತ್ನಿ ಮೆಲಾನಿಯಾ ಜತೆ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ ಆಗಮನದ ನಿಮಿತ್ತ ಅವರು ಭೇಟಿ ನೀಡುವ ಸ್ಥಳಗಳಾದ ಗುಜರಾತ್ನ ಅಹಮದಾಬಾದ್, ಆಗ್ರಾಗಳಲ್ಲೆಲ್ಲ ಹೆಚ್ಚಿನ ಭದ್ರತೆಗೆ ಸಿದ್ಧತೆ ಮಾಡಲಾಗಿದೆ.
ಆದರೆ ಆಗ್ರಾದಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ತುಂಬ ಕೀಟಲೆ ಮಾಡುತ್ತವೆ. ಈ ಕೋತಿಗಳು ರಕ್ಷಣಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿವೆ. ಎಷ್ಟೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದರೂ ಕೋತಿಗಳನ್ನು ನಿಯಂತ್ರಿಸುವುದು ಕಷ್ಟ. ಯಾಕೆಂದರೆ ಅವುಗಳ ಮೇಲೆ ಹಲ್ಲೆ ಮಾಡುವುದಾಗಲೀ, ಅವಕ್ಕೆ ಹೊಡೆದು ಓಡಿಸುವುದಾಗಿ ಅಪರಾಧ. ಹೀಗಾಗಿ ರಕ್ಷಣಾ ದಳ ಒಂದೊಳ್ಳೆ ಉಪಾಯವನ್ನು ಕಂಡುಕೊಂಡಿದೆ.
ಡೊನಾಲ್ಡ್ ಟ್ರಂಪ್ ಅವರಿಗೆ ರಕ್ಷಣೆ ನೀಡುವ ತಂಡದಲ್ಲಿ ಐದು ಲಂಗೂರ್ (ಉದ್ದನೆಯ ಬಾಲದ ಮಂಗಗಳು)ಗಳನ್ನು ನಿಯೋಜಿಸಲಾಗಿದೆ. ಟ್ರಂಪ್ ಅವರು ರಸ್ತೆ ಮಾರ್ಗದಲ್ಲಿ ಹೋಗುವಾಗ ಅವರಿಗೆ ಬೆಂಗಾವಲಾಗಿ ಹೋಗುವ ರಕ್ಷಣಾ ಪಡೆಗಳ ಜತೆ ಈ ಐದು ಲಂಗೂರ್ಗಳು ಇರಲಿವೆ.
ಸಾಮಾನ್ಯ ಪ್ರಭೇದದ ಮಂಗಗಳು ಈ ಲಂಗೂರ್ಗಳಿಗೆ ಹೆದರುತ್ತವೆ. ಲಂಗೂರ್ಗಳು ಸಾಮಾನ್ಯ ಕೋತಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅಲ್ಲದೆ ತುಂಬ ಆಕ್ರಮಣಶೀಲವಾಗಿರುತ್ತದೆ. ಅವುಗಳನ್ನು ಕಂಡರೆ ಕೋತಿಗಳು ಹತ್ತಿರ ಬರುವುದಿಲ್ಲ. ಇದೇ ಕಾರಣಕ್ಕೆ ಭದ್ರತಾ ದಳಗಳು ಈ ಐಡಿಯಾ ಮಾಡಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಫೆ.24ರಂದು ತಾಜ್ಮಹಲ್ಗೆ ಭೇಟಿ ನೀಡಲಿದ್ದಾರೆ. ತಾಜ್ಮಹಲ್ಗೆ ಕೂಡ ಈಗಾಗಲೇ ಪೇಂಟಿಂಗ್ ಮಾಡಲಾಗಿದೆ. ಅಲ್ಲಿನ ಜಾಗಗಳನ್ನೂ ಸ್ವಚ್ಛಗೊಳಿಸಲಾಗಿದೆ. (ಏಜೆನ್ಸೀಸ್)