ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯ

Fire safety
Published on

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ ಐವರು ಗಾಯಗೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಉತ್ತರಪ್ರದೇಶ ಮೂಲದ ರಾಕೇಶ್(೩೩), ಕೃಷ್ಣ (೨೪), ಹರಿರಾಮ್ (೨೮), ರಾಮ್‌ಧನ್ (೨೮) ಮತ್ತು ಅಶೋಕ್(೨೮) ಎಂಬುವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸೋಹಿಬ್ ಎಂಬಾತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಗಾಯಾಳುಗಳು, ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಕುಮಾರಸ್ವಾಮಿ ಲೇಔಟ್‌ನ ಚಂದ್ರನಗರದಲ್ಲಿರುವ ಶೀಟ್ ಮನೆಯಲ್ಲಿ ದೂರುದಾರ ಸೋಹಿಬ್ ಜತೆ ವಾಸವಾಗಿದ್ದರು. ನಿರ್ಮಾಣ ಹಂತದ ಮನೆಗಳಿಗೆ ಪಿಒಪಿ ಸೀಲಿಂಗ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ೮ ಗಂಟೆ ಗ್ಯಾಸ್ ಸ್ಟೌವ್ ಹಚ್ಚಿ ಚಪಾತಿ ಬೇಯಿಸುತ್ತಿದ್ದರು. ಈ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಆಗ ಐವರು ಗಾಯಗೊಂಡಿದ್ದಾರೆ. ದೂರುದಾರ ಸೋಹಿಬ್ ಶೌಚಾಲಯದಲ್ಲಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಸದ್ಯ ಗಾಯಾಳುಗಳು ಶೇ.೩೦ರಷ್ಟು ಗಾಯಗೊಂಡಿದ್ದಾರೆ ಖಾಸಗಿ ಸಿಲಿಂಡರ್ ಬಳಸುತ್ತಿದ್ದಾಗ ಈ ಅವಘಡ ನಡೆದಿದೆ. ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net