ಶೈಕ್ಷಣಿಕ ಕ್ರಾಂತಿಗೆ ಪಂಚ ಕೊಡುಗೆ: ಡಿಜಿಟಲ್ ಮತ್ತು ಆರ್-ಡಿ ಪಾಲಿಸಿ, ಹೊಸ ಕನಸು ಬಿತ್ತಿದ ಬೊಮ್ಮಾಯಿ

Front
ನೂತನ ಶಿಕ್ಷಣ ನೀತಿ ಅನುಷ್ಠಾನ ಚಾಲನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದ ಪಿ.ಸಿ.ಮೋಹನ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇದ್ದರು.
Published on

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಚಾಲನೆ, ದೇಶದಲ್ಲೇ ಮೊದಲ ಸಾಧನೆ

ಬೆಂಗಳೂರು: ಭವಿಷ್ಯದಲ್ಲಿ ರಾಜ್ಯದ ಶೈಕ್ಷಣಿಕ ದಿಕ್ಕು, ದೆಸೆಯನ್ನೇ ಬದಲಿಸಬಹುದಾದ ಐದು ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಉನ್ನತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೊಸ ಡಿಜಿಟಲೀಕರಣ ನೀತಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪರಿಷತ್ತು, ಎಂಟನೇ ತರಗತಿಯಿಂದಲೇ ಕಡ್ಡಾಯ ಕರಿಯರ್ ಗೈಡೆನ್ಸ್, ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಹಾಗೂ ಸಂಶೋಧನೆ- ಅಭಿವೃದ್ಧಿ ನೀತಿ ಜಾರಿಗೊಳಿಸುವುದಾಗಿ ಘೋಷಿಸಿದರು. ಶಿಕ್ಷಣ ನೀತಿಗೆ ಪೂರಕವಾಗಿ ಈ ಪ್ರಕಟಣೆ ಮಾಡಿದ ಅವರು ತೀರ್ವನದ ಹಿಂದಿರುವ ಕಾರಣಗಳನ್ನು ವಿವರಿಸಿದರು.

  1. ಕನೆಕ್ಟ್ ಕರ್ನಾಟಕ: ಡಿಜಿಟಲ್ ನೀತಿಯು ಡಿಜಿಟಲೀಕರಣದ ಅವಕಾಶಗಳನ್ನು ಬಳಸಿಕೊಳ್ಳುವ, ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಡಿಜಿಟಲ್ ಕಲಿಕೆ, ದಾಖಲೀಕರಣ, ಡಿಜಿಟಲ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಷಯ ಒಳಗೊಂಡಿರುತ್ತದೆ. ಬ್ರಾಡ್​ಬ್ಯಾಂಡ್ ನೆಟ್​ವರ್ಕಿಂಗ್ ಪ್ರತಿ ಗ್ರಾಮಕ್ಕೆ ಮುಟ್ಟಿಸುವ ಗುರಿ ಇದೆ, ಇದರ ಲಾಭ ಎಲ್ಲರಿಗೂ ತಲುಪಲಿದೆ.
  2. ನೋಟ್​ಬುಕ್ ಜತೆ ಟ್ಯಾಬ್: ನೂತನ ಶಿಕ್ಷಣ ನೀತಿಯಂತೆ ಈ ಬಾರಿ ಪ್ರಥಮ ವರ್ಷದ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೂ ಟ್ಯಾಬ್ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಸಮಗ್ರ ಕಲಿಕಾ ವ್ಯವಸ್ಥೆ (ಎಲ್​ಎಂಎಸ್) ಲಾಭ ಪ್ರತಿ ವಿದ್ಯಾರ್ಥಿಗಳಿಗಾಗಲಿದೆ. ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
  3. ಶೀಘ್ರದಲ್ಲೇ ಮತ್ತೊಂದು ಕೌನ್ಸಿಲ್ ರಚನೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಕೌನ್ಸಿಲ್ ರಚಿಸಲು ಉದ್ದೇಶಿಸಲಾಗಿದೆ. ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತೀರ್ಮಾನ ಜಾರಿಗೆ ಮುನ್ನ ಸಾಧಕ ಬಾಧಕದ ಬಗ್ಗೆ ಚರ್ಚೆ ಮಾಡಿ ನಿರ್ಣಯಿಸುತ್ತಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಕೌನ್ಸಿಲ್ ಕೂಡ ಇದೇ ರೀತಿ ಕಾರ್ಯನಿರ್ವಹಿಸಲಿದೆ.
  4. ವೃತ್ತಿ ಮಾರ್ಗದರ್ಶನ: ಕಾನ್ವೆಂಟ್​ನಲ್ಲಿ ಕಲಿತವರೇ ಶ್ರೇಷ್ಠ ಎಂಬ ಭಾವನೆ ತೊಡೆದುಹಾಕಬೇಕು. ಸರ್ಕಾರಿ ಶಾಲೆ ಮಕ್ಕಳು ಸಮರ್ಥರಿದ್ದಾರೆ, ಅವರಿಗೆ 8ನೇ ತರಗತಿಯಿಂದಲೇ ಕರಿಯರ್ ಗೈಡೆನ್ಸ್ ಕಡ್ಡಾಯವಾಗಿ ನೀಡಲು ಬಯಸುವುದಾಗಿ ಸಿಎಂ ಹೇಳಿದರು. ಪ್ರೌಢ ಶಿಕ್ಷಣ ಹಂತದಲ್ಲೇ ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನದಿಂದ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಹಳ್ಳಿಮಕ್ಕಳಲ್ಲಿನ ಕೀಳರಿಮೆ ದೂರಾಗಲಿದೆ.
  5. ಸಂಶೋಧನೆಗೆ ನಂಟು: ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಆರ್​ಆಂಡ್​ಡಿ ಸೆಂಟರ್​ಗಳಿವೆ. ಜೀವಶಾಸ್ತ್ರ, ವೈಮಾನಿಕ ಮಾಹಿತಿ ತಂತ್ರಜ್ಞಾನ ಹೀಗೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅದು ಇಲ್ಲಿದೆ. 180 ಅಂತಾರಾಷ್ಟ್ರೀಯ ಆರ್​ಆಂಡ್​ಡಿ ಕೇಂದ್ರಗಳು ಇವೆ. ಈ ಸಂಶೋಧನಾ ಕೇಂದ್ರಗಳಿಗೆ ಮಕ್ಕಳ ಸಂಪರ್ಕ ಆಗಬೇಕೆಂಬ ನಿಟ್ಟಿನಲ್ಲಿ ಹೊಸ ನೀತಿ ತರಲಾಗುತ್ತದೆ.

ರಾಜ್ಯದಲ್ಲಿ ಹೊಸ ಮನ್ವಂತರ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನಾವೇ ಫಸ್ಟ್

ಕಳೆದ 5-6 ವರ್ಷಗಳಿಂದ ಚರ್ಚೆಯಾಗುತ್ತಿದ್ದ ಹೊಸ ಶಿಕ್ಷಣ ನೀತಿ ಕೊನೆಗೂ ಸೋಮವಾರ ಜಾರಿಯಾಗಿದೆ. ಈ ಮೂಲಕ ಕರ್ನಾಟಕವು ದೇಶದಲ್ಲಿ ಹೊಸ ನೀತಿ ಅನುಷ್ಠಾನ ಆರಂಭಿಸಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಚುವಲ್ ರೂಪದಲ್ಲಿ ಪಾಲ್ಗೊಂಡು 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದರು. ‘ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕ ಸಾಕಷ್ಟು ಮುಂದಿದೆ. ಈ ನೀತಿಯು ಹೊಸ ಜ್ಞಾನಾಧಾರಿತ ವ್ಯವಸ್ಥೆಯನ್ನು ರಚನೆ ಮಾಡಲಿದೆ. ಜತೆಗೆ ಅನುಷ್ಠಾನದಲ್ಲಿರುವ ಹಲವು ಸವಾಲುಗಳಿಗೆ ಸೂಕ್ಷ್ಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿಕ್ಷಣದಲ್ಲಿರುವ ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ನೀತಿಗೆ ಎನ್​ಇಪಿಯಿಂದ ಮುಕ್ತಿ ಸಿಗಲಿದೆ. ಶಿಕ್ಷಣಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, ಮುಂದಿನ ಪೀಳಿಗೆಗೂ ಇದು ಸ್ವಾತಂತ್ರ್ಯವೇ ಆಗಲಿದೆ. ಎನ್​ಇಪಿ ಯಶಸ್ವಿಯಾದಲ್ಲಿ ಪ್ರತಿವರ್ಷ ಆ. 23 ಶಿಕ್ಷಣ ದಿನವಾಗಿ ಆಚರಿಸುವ ದಿನ ಬರಲಿದೆ ಎಂದು ಹೇಳಿದರು.

ಬಹಳಷ್ಟು ಜನ ದೇಶ ಆಳಿದ್ದಾರೆ, ಆದರೆ ಆಮೂಲಾಗ್ರ ಬದಲಾವಣೆ ಮಾಡಲು ಇನ್ನೊಂದು ದಿಕ್ಕಿಗೆ ತೆಗೆದುಕೊಂಡು ಹೋಗುವ ಸಾಹಸ ಮಾಡಿಲ್ಲ. ಈ ದೇಶವನ್ನು 21ನೇ ಶತಮಾನಕ್ಕೆ ತಯಾರು ಮಾಡಬೇಕು, ಭಾರತ ವಿಶ್ವಮಾನ್ಯತೆ ಪಡೆದಿರುವ ವಿಶ್ವ ನಾಯಕನ ಸ್ಥಾನ ಪಡೆದುಕೊಳ್ಳಬೇಕೆಂದರೆ ಬದಲಾವಣೆ ಅವಶ್ಯಕತೆ ಇದೆ ಎಂಬ ದೂರದೃಷ್ಟಿಯ ಫಲವೇ ಹೊಸ ಶಿಕ್ಷಣ ನೀತಿ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಹೊಂದಿದ ನಾಯಕರಾಗಿದ್ದು, ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ಎನ್​ಇಪಿ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಐದು ವರ್ಷದ ಸುದೀರ್ಘ ಸಮಾಲೋಚನೆ, ಎಲ್ಲರಿಂದ ಮಾಹಿತಿ ಪಡೆದು ಹೊಸ ನೀತಿ ರಚಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಜತೆಗೆ ಬೋಧನಾ ವಿಧಾನದಲ್ಲೂ ಬದಲಾಗಬೇಕು. ಉಪನ್ಯಾಸಕರು ಬದಲಾವಣೆಗೆ ಒಗ್ಗಿಕೊಳ್ಳಬೇಕು. ಸರ್ಕಾರವೂ ಇದಕ್ಕೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ತಿಮ್ಮೇಗೌಡ ಇದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿರುವ ಡಾ.ಕೆ.ಕಸ್ತೂರಿ ರಂಗನ್, ಪೊ›.ಎಂ.ಕೆ.ಶ್ರೀಧರ್, ಡಾ. ತೇಜಸ್ವಿ ಕಟ್ಟಿಮನಿ, ಪೊ›.ಅನುರಾಗ್ ಬೇಹರ್ ಅವರನ್ನು ಸನ್ಮಾನಿಸಲಾಯಿತು.

ರಾಜ್ಯದ ಪ್ರತಿಯೊಬ್ಬನೂ ಜ್ಞಾನವಂತನಾಗಿರಬೇಕು. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಯ ಕ್ರಿಯಾಶೀಲತೆಗೆ ಹೆಚ್ಚು ಅವಕಾಶ ಕೊಡಲಿದೆ. ಉನ್ನತ ಶಿಕ್ಷಣದಲ್ಲಿ ಸ್ವಾತಂತ್ರ್ಯ ಸಿಗಲಿದೆ. ಶಿಕ್ಷಣ ನೀತಿಗೆ ಪೂರಕವಾಗಿ ಡಿಜಿಟಲೀಕರಣ ಹಾಗೂ ಆರ್​ಆಂಡ್​ಡಿ ಪಾಲಿಸಿ ತರಲಾಗುತ್ತದೆ.| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗುಣಮಟ್ಟದ ಶಿಕ್ಷಣ ನೀಡಲು ಅಡ್ಡಿಯಾಗುತ್ತಿರುವ ಲೋಪದೋಷಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪರಿಹಾರ ಸಿಗಲಿದೆ.| ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವಈವರೆಗೆ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿಲ್ಲ. ಎನ್​ಇಪಿಯಲ್ಲಿ ಮಕ್ಕಳ ಭಾವನೆ ಅರ್ಥೈಸಿಕೊಂಡು, ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಿದ್ದೇವೆ.| ಬಿ.ಸಿ. ನಾಗೇಶ್ ಶಿಕ್ಷಣ ಸಚಿವಜ್ಞಾನಾಧಾರಿತ ಸದೃಢ ಸಮಾಜ ನಿರ್ವಣಕ್ಕೆ ಎನ್​ಇಪಿ ಸಹಕಾರಿಯಾಗಲಿದೆ. ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲೂ ಒಂದಷ್ಟು ಬದಲಾವಣೆ ಬರಲಿದೆ. ಭವಿಷ್ಯದ ಶೈಕ್ಷಣಿಕ ಆದ್ಯತೆ ಆಧರಿಸಿ ಈ ನೀತಿ ರೂಪಿಸಲಾಗಿದೆ.| ಡಾ. ಕಸ್ತೂರಿ ರಂಗನ್ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷಸಹಾಯವಾಣಿಗೆ ಚಾಲನೆ: ಕಾಲೇಜು ಶಿಕ್ಷಣ ಇಲಾಖೆ ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಯಾದ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಎಂಬ ವಿದ್ಯಾರ್ಥಿಗಳ ದಾಖಲಾತಿ ವ್ಯವಸ್ಥೆಗೂ ಮುಖ್ಯಮಂತ್ರಿ ಚಾಲನೆ ನೀಡಿದರು. ರಾಷ್ಟೀಯ ಶಿಕ್ಷಣ ನೀತಿಯ ಜಾರಿ ಸಂದರ್ಭದಲ್ಲಿ ಯಾವುದೇ ಗೊಂದಲ, ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ರೂಪಿಸಿರುವ ಶಿಕ್ಷಣ ನೀತಿಯ ವೆಬ್ಸೈಟ್ ಮತ್ತು ಸಹಾಯವಾಣಿಗೆ ಸಿಎಂ ಚಾಲನೆ ನೀಡಿದರು. 080-24486666 ಸಂಖ್ಯೆಯನ್ನು ಎಲ್ಲರೂ ಸಂಪರ್ಕ ಮಾಡಬಹುದು.

ಶೀಘ್ರ ಪ್ರಾಥಮಿಕ, ಪ್ರೌಢ ಹಂತ: ಹೊಸ ಶಿಕ್ಷಣ ನೀತಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೂ ಅಳವಡಿಸಿಕೊಳ್ಳುವ ವಿಚಾರವನ್ನು ಸಿಎಂ ಬಹಿರಂಗಪಡಿಸಿದರು. ಕಲಬುರಗಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ಕೊಡಲಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಅನುಷ್ಠಾನಕ್ಕೆ ಟಾಸ್ಕ್ ಫೋರ್ಸ್ ಇರುವಂತೆ ಪ್ರಾಥಮಿಕ, ಪ್ರೌಢ ಹಂತಕ್ಕೂ ಒಂದು ಸಮಿತಿ ರಚಿಸಿ ಸಾಧಕ ಬಾಧಕ ಅವಲೋಕಿಸಿ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net