ಕನ್ನಡಿಗರಿಗೆ ಪಂಚಪದ್ಮ

Pancha Padma new
Published on

ಪ್ರಸಿದ್ಧ ವೈದ್ಯವಿಜ್ಞಾನಿ, ಹೃದ್ರೋಗ ತಜ್ಞ ಡಾ. ಬಿ.ಎಂ.ಹೆಗ್ಡೆ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ವೇದವಿಜ್ಞಾನಿ ಡಾ. ಆರ್​ಎಲ್ ಕಶ್ಯಪ್ ಮತ್ತು ಕ್ರೀಡಾಪಟು ಕೆ.ವೈ. ವೆಂಕಟೇಶ್ 2021ನೇ ಸಾಲಿನ ಪದ್ಮ ಪುರಸ್ಕಾರಕ್ಕೆ ಪಾತ್ರರಾಗಿರುವ ಪಂಚ ಕನ್ನಡಿಗರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿರುವ 119 ಸಾಧಕರನ್ನು ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪದ್ಮಗೌರವಕ್ಕೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಜನರ ನೆಚ್ಚಿನ ಡಾಕ್ಟರ್ ಭಾರತದ ಪ್ರಸಿದ್ಧ ವೈದ್ಯವಿಜ್ಞಾನಿ, ಹೃದ್ರೋಗ ತಜ್ಞ, ಶಿಕ್ಷಣತಜ್ಞ, ಲೇಖಕ ಡಾ. ಬೆಳ್ಳೆ ಮೋನಪ್ಪ (ಬಿ.ಎಂ.) ಹೆಗ್ಡೆ ದೇಶ, ವಿದೇಶಗಳ ಪ್ರಸಿದ್ಧರ ಒಡನಾಡಿಯಾಗಿದ್ದುಕೊಂಡೇ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದವರು. ವೈದ್ಯರಾಗಷ್ಟೇ ಅಲ್ಲ ಸಮಾಜಕ್ಕೇನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ‘ಜನರ ನೆಚ್ಚಿನ ಡಾಕ್ಟರ್’ ರೋಗಿಗಳಿಗೆ ಧೈರ್ಯ ಹೇಳುವ ಮೂಲಕವೇ ವಾಸಿ ಮಾಡುವ ಖ್ಯಾತಿ ಹೊಂದಿದವರು. ಅಲೋಪಥಿ ತಜ್ಞರಾಗಿದ್ದುಕೊಂಡೇ ಆ ಕ್ಷೇತ್ರದ ವಿರೋಧಾಭಾಸಗಳನ್ನು ನಿಖರವಾಗಿ ವಿವರಿಸುವ ಮೂಲಕ ಹೆಚ್ಚಿನವರ ಕೆಂಗಣ್ಣಿಗೆ ತುತ್ತಾದವರು. ಭಾರತೀಯ ಚಿಕಿತ್ಸಾ ಪದ್ಧತಿಗಳ ಬಗ್ಗೆ ವಿದೇಶಗಳಲ್ಲಿ ಸದಭಿಪ್ರಾಯ ರೂಪಿಸಿ ಗಮನ ಸೆಳೆದವರು. ತೆಂಗಿನ ಎಣ್ಣೆಯ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವುದು ಅಪಪ್ರಚಾರ ಎಂದು ಅದರ ಮಹತ್ವವನ್ನು ಮನದಟ್ಟು ಮಾಡಿದ್ದಾರೆ. ತೆಂಗಿನಎಣ್ಣೆಯಿಂದ ಕೊಲೆಸ್ಟ್ರಾಲ್ ಬರುವುದಿಲ್ಲ ಎಂಬುದನ್ನು ನಿಖರವಾಗಿ ಹೇಳುತ್ತಾರೆ. ವಿ.ಶಂಕರ ಹೆಗ್ಡೆ ಮತ್ತು ಚಂದ್ರಾವತಿ ಅವರ ಮಗನಾಗಿ 1938, ಆ.18ರಂದು ಜನಿಸಿದ ಬಿ.ಎಂ. ಹೆಗ್ಡೆ, ಮದ್ರಾಸಿನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಔಷಧಶಾಸ್ತ್ರದಲ್ಲಿ ಎಂಡಿ, ಯುನೈಟೆಡ್ ಕಿಂಗ್​ಡಂನಲ್ಲಿ ಹೆಚ್ಚಿನ ಅಧ್ಯಯನ ಮಾಡಿದವರು. 1964ರಲ್ಲಿ ಕೆಎಂಸಿ ಸೇರ್ಪಡೆ. 2003ರಲ್ಲಿ ಮಣಿಪಾಲ ವಿವಿ ಉಪಕುಲಪತಿಯಾಗಿ ನಿವೃತ್ತರು. ಪದ್ಮಭೂಷಣ, ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ನೂರಾರು ಪ್ರಶಸ್ತಿ, ಗೌರವಗಳು ಲಭಿಸಿವೆ.

ದೇವರಿಗೆ ನನ್ನ ಧನ್ಯವಾದ. ದೇಶಕ್ಕೆ, ಕೇಂದ್ರಕ್ಕೆ ವಂದನೆ. 2010ರಲ್ಲಿ ಪದ್ಮಭೂಷಣ ಬಂದಿತ್ತು. ಪದ್ಮವಿಭೂಷಣದ ನಿರೀಕ್ಷೆ ಇತ್ತು. ಎಲ್ಲದಕ್ಕೂ ಸಮಯ ಬರಬೇಕು, ಈಗ ಬಂದಿದೆ. ಖುಷಿಯಾಗಿದೆ. | ಡಾ.ಬಿ.ಎಂ.ಹೆಗ್ಡೆ

ಕಂಬಾರರಿಗೆ ಗರಿ,ಗಡಿನಾಡಲ್ಲಿ ಖುಷಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಕವಿ, ಕಥೆಗಾರ, ಕಾದಂಬರಿಕಾರ ಹಾಗೂ ನಾಟಕಕಾರರು. ಬೆಳಗಾವಿಯ ಘೋಡಿಗೇರಿ ಗ್ರಾಮದಲ್ಲಿ 1937ರ ಜ.2ರಂದು ಜನಿಸಿರುವ ಇವರು ಚಿಕ್ಕಂದಿನಿಂದಲೇ ಸಾಹಿತ್ಯ ಬಗ್ಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಬೆಂಗಳೂರು ವಿವಿ ಅಧ್ಯಾಪಕರಾಗಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಹಾಗೂ ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಷಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ ಹಾಗೂ ಜಪಾನ್ ಸೇರಿ ಮುಂತಾದ ವಿವಿಗಳಲ್ಲಿ ಜಾನಪದ ಹಾಗೂ ರಂಗಭೂಮಿ ಕುರಿತು ಉಪನ್ಯಾಸ ನೀಡಿದ್ದಾರೆ. ಜೋಕುಮಾರಸ್ವಾಮಿ, ಕಾಡುಕುದುರೆ ಹಾಗೂ ಸಿರಿಸಂಪಿಗೆ ಸೇರಿ ಹತ್ತಾರು ಕೃತಿ, ಕಾವ್ಯ, ನಾಟಕಗಳು ಹಾಗೂ ಸಂಶೋಧನಾ ಗ್ರಂಥಗಳನ್ನು ಬರೆದಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡಗೆ ನೀಡಿರುವ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಳಿದಾಸ ಸಮ್ಮಾನ್, ನಾಡೋಜ, ಪಂಪ ಪ್ರಶಸ್ತಿ ಮತ್ತು ಜೋಶು ಸಾಹಿತ್ಯ ಪುರಸ್ಕಾರಂ ಸೇರಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

ಇದು ಕನ್ನಡ ಸರಸ್ವತಿಗೆ ಸಂದ ಪ್ರಶಸ್ತಿ. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಸೇರಿ ದಶಕಗಳಿಂದ ಕನ್ನಡದ ಸೇವೆ ಮಾಡಿರುವುದಕ್ಕೆ ಗೌರವಿಸಿದ್ದಾರೆ. ಸಮಸ್ತ ಕನ್ನಡಿಗರಿಗೇ ಈ ಪ್ರಶಸ್ತಿಯನ್ನು ಅರ್ಪಿಸಿದ್ದೇನೆ. | ಡಾ. ಚಂದ್ರಶೇಖರ ಕಂಬಾರ

ಮಂಗಳಮುಖಿಯರಿಗೆ ಮಾದರಿ ಮಂಜಮ್ಮ ಸಮಾಜದಲ್ಲಿ ನಿತ್ಯ ಕಣ್ಣೀರಲ್ಲೇ ಕೈತೊಳೆಯುವ ಮಂಗಳಮುಖಿಯರ ಕಷ್ಟ ಹೇಳತೀರದು. ಕಲೆಯನ್ನೇ ದೈವವಾಗಿಸಿಕೊಂಡು ಸಮಾಜದಲ್ಲಿ ಮಂಗಳಮುಖಿಯರು ಹೀಗೂ ಜೀವಿಸಬಹುದು ಎಂದು ತೋರಿಸಿಕೊಟ್ಟವರು ಮಾತಾ ಮಂಜಮ್ಮ ಜೋಗತಿ. ಬಳ್ಳಾರಿ ಜಿಲ್ಲೆ ಮರಿಯಮ್ಮನಹಳ್ಳಿಯ ಮಂಜಮ್ಮ ಚಿಕ್ಕವಯಸ್ಸಿನಲ್ಲೇ ಮಂಗಳಮುಖಿಯಾಗಿ ಪರಿವರ್ತನೆಗೊಂಡವರು. ತಮ್ಮ ಜೀವನದುದ್ದಕ್ಕೂ ರೇಣುಕಾ ಯಲ್ಲಮ್ಮನ ಪದಗಳು ಹಾಗೂ ಜಾನಪದ ನೃತ್ಯ ಕಲೆಯನ್ನು ಪ್ರೀತಿಸಿ ಹೆಸರು ಮಾಡಿದವರು. ತಮ್ಮೊಟ್ಟಿಗೆ 12 ಮಂದಿ ಮಂಗಳಮುಖಿಯರಿಗೂ ಜಾನಪದ ಕಲೆ ಹಾಗೂ ಪರಂಪರೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಎಚ್.ಎಲ್.ನಾಗೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರ ಆತ್ಮಕಥನ ವಿಷಯವು ಮಹಿಳಾ ಮಹಾವಿದ್ಯಾಲಯದ ಬಿಎ 5ನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿದೆ. ರಾಜ್ಯ ಸರ್ಕಾರವು ಮಾತಾ ಮಂಜಮ್ಮ ಅವರ ಕಲೆಯನ್ನು ಗುರುತಿಸಿ ಇತ್ತೀಚೆಗೆ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆಯನ್ನಾಗಿ ನೇಮಿಸಿದೆ.

4 ದಶಕಗಳ ಕಾಲ ಸಮಾಜ ನನ್ನನ್ನು ದೂರವಿಟ್ಟಿತ್ತು. ಆಗ ನನಗೆ ಗೌರವ ತಂದುಕೊಟ್ಟಿದ್ದೇ ರಂಗಭೂಮಿ, ಜಾನಪದ ಕಲೆ. ಇದರಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಈವರೆಗೂ ನನಗೆ ಇರಲು ಸ್ವಂತ ಮನೆಯಿಲ್ಲ. ಪದ್ಮಶ್ರೀ ಗೌರವ ಸಿಕ್ಕಿದ್ದು ಸಂತಸವಾಗಿದೆ. | ಮಂಜಮ್ಮ ಜೋಗತಿ

ಸಾಧನೆಯ ವಾಮನಮೂರ್ತಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥವಾಗಿರುವವರು ಬೆಂಗಳೂರಿನ ಕೆ. ವೈ. ವೆಂಕಟೇಶ್. ಕುಬ್ಜರಾಗಿದ್ದರೂ ಕುಗ್ಗದೆ ಪ್ಯಾರಾ ಕ್ರೀಡೆಯಲ್ಲಿ ಮೇರು ಸಾಧನೆ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ನಲ್ಲೂ ವೆಂಕಟೇಶ್ ಹೆಸರು ದಾಖಲಿಸಿದ್ದಾರೆ. 4 ಅಡಿ 2 ಇಂಚು ಎತ್ತರದ ಅವರು, ಪೋಲಿಯೊ ಪೀಡಿತ ಮಹಿಳೆ ಸಿಎನ್ ಜಾನಕಿ ಎಂಬವರು 1992ರಲ್ಲಿ ಇಂಗ್ಲಿಷ್ ಕಾಲುವೆಯನ್ನು ಈಜುವ ಮೂಲಕ ತೋರಿದ ಸಾಧನೆಯಿಂದ ಸ್ಪೂರ್ತಿ ಪಡೆದು ಪ್ಯಾರಾ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. 2005ರ ವಿಶ್ವ ಡ್ವಾರ್ಫ್ ಗೇಮ್ಸ್​ನಲ್ಲಿ ಗರಿಷ್ಠ (2 ಚಿನ್ನ, 1 ಬೆಳ್ಳಿ, 3 ಕಂಚು ಸಹಿತ 6 ಪದಕ) ಪದಕಗಳನ್ನು ಗೆಲ್ಲುವ ಮೂಲಕ ಅಮೋಘ ಸಾಧನೆ ತೋರಿದ್ದರು. ಈ ಮೂಲಕ ಭಾರತ ತಂಡ ಪದಕಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಲು ನೆರವಾಗಿದ್ದರು. 2009ರ ಡ್ವಾರ್ಫ್ ಒಲಿಂಪಿಕ್ ಗೇಮ್ಸ್​ನಲ್ಲೂ ಭಾರತ ತಂಡವನ್ನು ಮುನ್ನಡೆಸಿದ್ದ ವೆಂಕಟೇಶ್ 4 ವೈಯಕ್ತಿಕ ಪದಕಗಳನ್ನು (1 ಚಿನ್ನ, 3 ಬೆಳ್ಳಿ) ಗೆದ್ದುಕೊಂಡಿದ್ದರು. ಅಥ್ಲೆಟಿಕ್ಸ್ ಜತೆಗೆ ಬ್ಯಾಡ್ಮಿಂಟನ್, ಬಾಸ್ಕೆಟ್​ಬಾಲ್, ಹಾಕಿ, ಫುಟ್​ಬಾಲ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲೂ ವೆಂಕಟೇಶ್ ಪರಿಣತರು. ವಿದ್ಯಾಭ್ಯಾಸದಲ್ಲೂ ಹಿಂದುಳಿಯದ ವೆಂಕಟೇಶ್ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಈಗ 49 ವಯಸ್ಸಿನ ವೆಂಕಟೇಶ್, ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆ ಖಜಾಂಚಿ ಮತ್ತು ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಏಕಲವ್ಯ, ರಾಜ್ಯೋತ್ಸವ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.

ನನ್ನಂಥ ಸಾಮಾನ್ಯ ಕ್ರೀಡಾಪಟುವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಸಂತೋಷವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಇದರಿಂದ ಮತ್ತಷ್ಟು ಕ್ರೀಡಾ ಸೇವೆಗಳನ್ನು ಮಾಡಲು ಉತ್ತೇಜನ ಕೊಟ್ಟಂತಾಗಿದೆ. | ಕೆ. ವೈ. ವೆಂಕಟೇಶ್

ಆಧುನಿಕತೆ, ಪ್ರಾಚೀನದ ಸಮ್ಮಿಲನ ಡಾ. ಕಶ್ಯಪ್

ಎಲೆಕ್ಟ್ರಿಕಲ್, ಕಂಪ್ಯೂಟರ್ ಇಂಜಿನಿಯರಿಂಗ್ ಪ್ರೊಫೆಸರ್, ಸಂಶೋಧಕರಾಗಿರುವ ಡಾ. ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರದ್ದು ವೇದ ಸಂಶೋಧನೆಯಲ್ಲೂ ಅಷ್ಟೇ ಪ್ರಸಿದ್ಧ ಹೆಸರು. ಕಂಪ್ಯೂಟರ್ ಪಾಟರ್ನ್ ರೆಕಗ್ನಿಷನ್ ಹಾಗೂ ಮೆಷಿನ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ನಾಲ್ಕು ವೇದಗಳ ಎಲ್ಲ ಮಂತ್ರಗಳಿಗೂ ಆಧ್ಯಾತ್ಮಿಕಪರವಾದ ವಿವರಣೆಯನ್ನು ಬರೆದಿದ್ದಾರೆ, ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪೊ›ಫೆಸರ್ ಆಗಿದ್ದರು. ವೇದಸಂಶೋಧನೆ ಮತ್ತು ಪ್ರಸಾರ ಪ್ರಚಾರಕ್ಕಾಗಿ ಬೆಂಗಳೂರಿನಲ್ಲಿ ಶ್ರೀ ಅರಬಿಂದೋ ಕಹಾಲಿ ಶಾಸ್ತ್ರೀ ಇನ್​ಸ್ಟಿಟ್ಯೂಟ್ ಆಫ್ ವೇದಿಕ್ ಕಲ್ಟರ್ (ಸಾಕ್ಷಿ) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಕಂಪ್ಯೂಟರ್ ಪಾಟರ್ನ್ ರೆಕಗ್ನಿಷನ್ ಹಾಗೂ ಮೆಷಿನ್ ಇಂಟೆಲಿಜೆನ್ಸ್ ಸಂಶೋಧನೆಗಾಗಿ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗೃಪ್, ಹಾರ್ವಡ್ ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪದವಿ ಪಡೆದಿದ್ದಾರೆ. ಶ್ರೀ ಅರವಿಂದರು ಮತ್ತು ಕಪಾಲಿಶಾಸ್ತ್ರಿಗಳ ದಾರಿಯಲ್ಲಿ ವೇದಮಂತ್ರಗಳ ಅರ್ಥಾನುಸಂಧಾನದಲ್ಲಿ ನಿರತರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net