ಬೈಡೆನ್ ಆಡಳಿತಕ್ಕೆ ಪಂಚ ಸವಾಲು

Biden Kamala 2
Published on

ಅಮೆರಿಕದ ನೂತನ ಬೈಡೆನ್-ಕಮಲಾ ಸರ್ಕಾರಕ್ಕೆ ಎದುರಾಗಿರುವ ಆಂತರಿಕ ಸವಾಲುಗಳ ತೀವ್ರತೆ 1933ರಲ್ಲಿ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್ ಎದುರಿಸಿದ್ದ ಸವಾಲುಗಳಿಗಿಂತ ಹೆಚ್ಚಿನದ್ದು. ಅಂದು ಗ್ರೇಟ್ ಡಿಪ್ರೆಶನ್ ಇತ್ತು. ಇಂದು ಕೋವಿಡ್ 19 ಸಂಕಷ್ಟ, ಆರ್ಥಿಕ ಕಷ್ಟ ಹೆಚ್ಚು ಚಿಂತೆಯನ್ನು ಉಂಟುಮಾಡಿದೆ. ಇದಲ್ಲದೆ, ಹಿಂದಿನ ಸರ್ಕಾರದ ನೀತಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅಡ್ಡಿ ಆತಂಕಗಳು ಸೇರಿ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿಬಂದಿದೆ. ಈ ಪೈಕಿ, ಆಂತರಿಕವಾಗಿ ಎದುರಿಸ ಬೇಕಾಗಿರುವ ಪಂಚ ಸವಾಲುಗಳ ಸಂಕ್ಷಿಪ್ತ ವಿವರ.

ಟ್ರಂಪ್ ನಿಕಟವರ್ತಿಗಳ ವಿರುದ್ಧ ಚೀನಾ ನಿರ್ಬಂಧ

ಜೋ ಬೈಡೆನ್ -ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭವಾದ ಬೆನ್ನಿಗೇ, ಚೀನಾ ಅಭಿನಂದನೆಗಳನ್ನು ಸಲ್ಲಿಸಿದೆ. ಅದೇ ಹೊತ್ತಿಗೆ, ಮೈಕ್ ಪಾಂಪಿಯೋ ಮತ್ತು ಟ್ರಂಪ್ ಆಡಳಿತದ 27 ಜನರ ವಿರುದ್ಧ ನಿರ್ಬಂಧಗಳನ್ನು ಹೇರಿದೆ. ಅವರ ವಿಲಕ್ಷಣ ನಡೆಗಳು ಮತ್ತು ಸಾರಾಸಗಟಾಗಿ ಚೀನಾದ ಹಿತಾಸಕ್ತಿಗಳನ್ನು ಕಡೆಗಣಿಸಿದ್ದಕ್ಕಾಗಿ ಈ ನಿರ್ಬಂಧ ಎಂದು ಅದು ಹೇಳಿಕೊಂಡಿದೆ. ಕೆಲ ನಿರ್ಬಂಧಿತರ ಪಟ್ಟಿ ಹೀಗಿದೆ - ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಆರ್ಥಿಕ ಸಲಹೆಗಾರ ಪೀಟರ್ ಕೆ ನವರ್ರೋ, ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಸಿ ಓಬ್ರಿಯಾನ್, ವೈಟ್ ಹೌಸ್​ನ ಮಾಜಿ ಮುಖ್ಯ ಸ್ಟ್ರಾಟಜಿಸ್ಟ್ ಸ್ಟೀಫೆನ್ ಕೆ. ಬನ್ನಾನ್, ಹ್ಯೂಮನ್ ಸರ್ವೀಸಸ್ ಸೆಕ್ರೆಟರಿ ಅಲೆಕ್ಸ್ ಎಂ ಅಝುರ್, ವಿಶ್ವಸಂಸ್ಥೆ ರಾಯಭಾರಿ ಕೆಲ್ಲಿ ಡಿ.ಕೆ.ಕ್ರಾಫ್ಟ್, ಈಸ್ಟ್ ಏಷ್ಯನ್ ಆಂಡ್ ಪೆಸಿಫಿಕ್ ಅಫೇರ್ಸ್ ಬ್ಯೂರೋದ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಸ್ಟೇಟ್ ಡೇವಿಡ್ ಆರ್ ಸ್ಟಿವೆಲ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್.

1. ಸಾರ್ವಜನಿಕ ಆರೋಗ್ಯ

ಕೋವಿಡ್ ನಿಯಂತ್ರಣ ಮೀರಿ ಎಲ್ಲ ವ್ಯವಸ್ಥೆಯನ್ನೂ ಹದಗೆಡಿಸಿದೆ. ಕರೊನಾ ತಡೆಗೆ ಸಂಬಂಧಿಸಿ ಟ್ರಂಪ್ ಆಡಳಿತ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ, ಲಸಿಕೆ ವಿತರಣಾ ಕಾರ್ಯ ವಿಫಲವಾಗಿದೆ. ತುರ್ತಾಗಿ ಲಸಿಕೆ ಸಿದ್ಧಪಡಿಸಿ ಅಮೆರಿಕನ್ನರಿಗೆ ವಿತರಿಸುವ ದೊಡ್ಡ ಸವಾಲು ಬೈಡೆನ್ ಸರ್ಕಾರದ ಹೆಗಲೇರಿದೆ.

ಅಮೆರಿಕನ್ ರೆಸ್ಕೂ ್ಯ ಪ್ಲಾನ್: 1.9 ಲಕ್ಷ ಕೋಟಿ ಡಾಲರ್ ಮೊತ್ತದ ಉತ್ತೇಜನಾ ಯೋಜನೆ ಅಮೆರಿಕನ್ ರೆಸ್ಕೂ ್ಯ ಪ್ಲಾನ್ ಅನ್ನು ಕಳೆದ ವಾರವೇ ಬೈಡೆನ್ ಘೋಷಿಸಿದ್ದರು. ಇದರಲ್ಲಿ 2000 ಕೋಟಿ ಡಾಲರ್ ಅನ್ನು ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಮೀಸಲಿಟ್ಟಿದ್ದಾರೆ. ಮೊದಲ 100 ದಿನಗಳಲ್ಲಿ 100 ದಶಲಕ್ಷ ಜನರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ.

2. ಅರ್ಥ ವ್ಯವಸ್ಥೆ

ಕೋವಿಡ್ ಸಂಕಷ್ಟದ ಕಾರಣ ಲಕ್ಷಾಂತರ ಅಮೆರಿಕನ್ನರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣ ವ್ಯಾಪಾರಗಳು ಮುಚ್ಚಿವೆ. ಅನೇಕ ಕುಟುಂಬಗಳು ನಿತ್ಯ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿವೆ. ಅಮೆರಿಕನ್ ರೆಸ್ಕೂ ್ಯ ಪ್ಲಾನ್ ಪ್ರಕಾರವೇ, ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೇರ ಪರಿಹಾರ ಒದಗಿಸುವುದಕ್ಕೆ 1 ಲಕ್ಷ ಕೋಟಿ ರೂಪಾಯಿ ಒದಗಿಸಿದೆ ಬೈಡೆನ್ ಸರ್ಕಾರ. ಇದರಲ್ಲಿ, ವಾರಕ್ಕೆ ಪ್ರತಿ ಕುಟುಂಬಕ್ಕೆ 1,400 ಡಾಲರ್ ಹೆಚ್ಚುವರಿ ಉತ್ತೇಜನ ಪರಿಹಾರವಾದರೆ, 400 ಡಾಲರ್ ನಿರುದ್ಯೋಗ ವಿಮೆಗೆ ಪಾವತಿಯಾಗುತ್ತದೆ. ಶಾಲೆಗಳ ಮರು ಆರಂಭ, ವಸತಿ ನೆರವು, ಸಣ್ಣ ವ್ಯಾಪಾರ, ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳಿಗೆ ನೆರವು ಒದಗಿಸುವುದಕ್ಕೂ ಈ ಯೋಜನೆ ಹಣಕಾಸು ನೆರವು ಒದಗಿಸಲಿದೆ.

3. ಸರ್ಕಾರಿ ಯಂತ್ರಕ್ಕೆ ಚುರುಕು

ರಿಪಬ್ಲಿಕನ್ನರ ಆಡಳಿತದಲ್ಲಿ ಕುಸಿದ ಸರ್ಕಾರಿ ಯಂತ್ರಕ್ಕೆ ಚುರುಕು ಮುಟ್ಟಿಸುವ ಸವಾಲು ಹೆಗಲೇರಿದೆ. ಬೈಡೆನ್ ಈಗಾಗಲೇ ಘೋಷಿಸಿರುವ ಅಮೆರಿಕನ್ ರೆಸ್ಕೂ ್ಯ ಪ್ಲಾನ್​ಗೆ ರಿಪಬ್ಲಿಕನ್ನರ ಹಾಗೂ ಕೆಲವು ಸಾಂಪ್ರದಾಯಿಕ ಡೆಮಾಕ್ರಟರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಯೋಜನೆಗೆ ಅಂದಾಜಿಸಲಾದ ಮೊತ್ತದ ಕಾರಣ ಈ ವಿರೋಧ ವ್ಯಕ್ತವಾಗಬಹುದು ಎಂಬುದು ಪರಿಣತರ ಅಭಿಮತ.

4. ಏಕತೆಯ ಸೂತ್ರ

ರಿಪಬ್ಲಿಕನ್ನರ ಆಡಳಿತದಲ್ಲಿ ಸೃಷ್ಟಿಯಾದ ವಿಭಜನೆಯ ನೀತಿಯಿಂದಾಗಿ ಅನೇಕ ಪ್ರಾದೇಶಿಕ ಸವಾಲುಗಳು ಎದುರಾಗಿವೆ. ಹರಿದು ಹಂಚಿ ಹೋದ ಅಮೆರಿಕನ್ನರನ್ನು ಮತ್ತೆ ಒಂದುಗೂಡಿಸುವ ಅನಿವಾರ್ಯತೆ ಕ್ಯಾಪಿಟಲ್ ಹಿಲ್ ಹಿಂಸಾಚಾರದ ನಂತರದಲ್ಲಿ ಸೃಷ್ಟಿಯಾಗಿದೆ. ಟ್ರಂಪ್ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆ ದೇಶವನ್ನು ಮತ್ತೆ ಧ್ರುವೀಕರಣಕ್ಕೆ ಒಯ್ಯಲಿದ್ದು, ಈ ಸೂಕ್ಷ್ಮತೆಯ ಅರಿವಿನೊಂದಿಗೆ ಮಹಾಭಿಯೋಗ ಪ್ರಕ್ರಿಯೆ ಕುರಿತು ಬೈಡೆನ್ ಆಡಳಿತ ಗಮನಹರಿಸಬೇಕಾಗುತ್ತದೆ.

5. ಪ್ರಜಾಪ್ರಭುತ್ವದ ಬೇರಿಗೆ ನೀರು

ಕಳೆದ ವಾರ ಪ್ರಕಟವಾದ ಕ್ವಿನ್ ನಿಪಿಯಾಕ್ ಪೋಲ್ ಪ್ರಕಾರ, ಶೇಕಡ 74 ಮತದಾರರು ಅಮೆರಿಕದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಆಡಳಿತದ ಕೊನೆಯ ಅವಧಿಯಲ್ಲಿ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತಕ್ಕೂ ಕಾರಣವಾಗಿತ್ತು. ಆದ್ದರಿಂದ ಅಮೆರಿಕದ ಪ್ರಜಾಪ್ರಭುತ್ವದ ನ್ಯಾಯಸಮ್ಮತ ವ್ಯವಸ್ಥೆಯ ಪುನಸ್ಥಾಪನೆಯ ಬೃಹತ್ ಸವಾಲು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net