

Health |ಮನುಷ್ಯ ತನ್ನ ದೇಹದಲ್ಲಿ ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವಿಟಮಿನ್ ಡಿ ತುಂಬಾ ಮುಖ್ಯವಾಗುತ್ತದೆ. ಆದರೆ ವಿಟಮಿನ್ ಡಿ ಕೊರತೆಯಿಂದಾಗಿ ಕ್ಯಾನ್ಸರ್ ಸಂಭವಿಸುತ್ತಾ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಾರೆ. ಸಂಶೋಧನೆಯು ವಿಟಮಿನ್ ಡಿ ಕಡಿಮೆ ಮಟ್ಟವು ಕೆಲವು ರೀತಿಯ ಕ್ಯಾನ್ಸರ್‌ಗೆ ಸಂಬಂಧಿಸಿರಬಹುದು ಎಂದು ಸೂಚಿಸುತ್ತದೆ. ವಿಟಮಿನ್ ಡಿ, ಕ್ಯಾನ್ಸರ್ ಅಪಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ವಿಜ್ಞಾನವು ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.
ವಿಟಮಿನ್ ಡಿ ಕೊರತೆಯು ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬುದಕ್ಕೆ ಯಾವುದೇ ನಿರ್ಣಾಯಕ ಸಾಕ್ಷಿಗಳಿಲ್ಲ. ಸೂರ್ಯನ ಬೆಳಕು, ಉತ್ತಮ ಆಹಾರದ ಅಗತ್ಯತೆಗಳನ್ನು ನಮ್ಮ ದೇಹಕ್ಕೆ ಪೂರೈಸಿಕೊಳ್ಳುವುದರಿಂದ ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳುವುದು ಮುಖ್ಯ. ಭಾರತದಲ್ಲಿ ಮಾತ್ರ ಸುಮಾರು 70 ರಿಂದ 100 ಪ್ರತಿಶತದಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಿಂದ ಅಂದಾಜಿಸಲಾಗಿದೆ. ಕೆಲವು ಅಧ್ಯಯನಗಳು ಇದಕ್ಕೆ ಸಂಬಂಧವನ್ನು ಸೂಚಿಸುತ್ತವೆಯಾದರೂ, ನೇರ ಕಾರಣ ಮತ್ತು ಪರಿಣಾಮ ಉಂಟಾಗಿರುವುದು ಇನ್ನೂ ಕಂಡುಬಂದಿಲ್ಲ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಾಗುವ ಉರಿಯೂತಗಳನ್ನು ಕಡಿಮೆ ಮಾಡುತ್ತದೆ.
ನಮ್ಮ ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹಾನಿಕಾರಕ ಕೋಶಗಳನ್ನು ಗುರುತಿಸಿ ಅದನ್ನು ನಾಶ ಮಾಡಲು ಸಹಾಯ ಮಾಡುತ್ತದೆ.
ಜೀವಕೋಶಗಳಿಗೆ ಆಗುವ ಹಾನಿಯನ್ನು ಸರಿಪಡಿಸಲು ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ರೂಪಾಂತರಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಸಾಮಾನ್ಯ ಜೀವಕೋಶದ ಕಾರ್ಯವನ್ನು ಉತ್ತೇಜಿಸಿ ಮತ್ತು ಅಸಹಜ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ವಿಟಮಿನ್ ಡಿ ಕೊರತೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧ ತಿಳಿಯಲು ಹಲವಾರು ಅಧ್ಯಯನ ನಡೆಸಲಾಗಿದೆ.
ಮರಣಕ್ಕೆ ಪ್ರಮಾಣ: ಕಡಿಮೆ ವಿಟಮಿನ್ ಡಿ ಮಟ್ಟವನ್ನು ಹೊಂದಿರುವ ಜನರು ಕ್ಯಾನ್ಸರ್ನಿಂದ ಸಾಯುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಗಳು ಹೇಳಿವೆ.
ಪ್ರಾಸ್ಟೇಟ್ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್: ಕೆಲವು ಸಂಶೋಧನೆಗಳು ಹೆಚ್ಚಿನ ವಿಟಮಿನ್ ಡಿ ಮಟ್ಟಗಳು ವಾಸ್ತವವಾಗಿ ಈ ಕ್ಯಾನ್ಸರ್‌ಗಳ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿರಬಹುದು ಎಂದು ಸೂಚಿಸುತ್ತವೆ.
ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್: ಕೆಲವು ಅಧ್ಯಯನಗಳು ವಿಟಮಿನ್ ಡಿ ಮಟ್ಟಗಳು ಮತ್ತು ಸ್ತನ ಅಥವಾ ಶ್ವಾಸಕೋಶದ ಕ್ಯಾನ್ಸರ್ ಅಪಾಯದ ನಡುವೆ ಯಾವುದೇ ಸಂಬಂಧವಿಲ್ಲ ಎಂದಿವೆ.
ಕೊಲೊರೆಕ್ಟಲ್ ಕ್ಯಾನ್ಸರ್: ಹೆಚ್ಚಿನ ವಿಟಮಿನ್ ಡಿ ಮಟ್ಟವನ್ನು ಹೊಂದಿರುವ ಜನರು ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎಂದು ಸಂಶೋಧನೆ ಹೇಳಿದೆ.
ಕೆಲ ಅಧ್ಯಯನಗಳು ಈ ಮೇಲ್ಕಂಡ ಅಂಶಗಳನ್ನು ತಿಳಿಸುತ್ತವೆಯಾದರೂ, ವಿಜ್ಞಾನಿಗಳು ವಿಟಮಿನ್ ಡಿ ಕೊರತೆಯು ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂದು ಒತ್ತಿ ಹೇಳುತ್ತಾರೆ. ಬದಲಾಗಿ, ಕಳಪೆ ಆಹಾರ, ಧೂಮಪಾನ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಇದು ರೋಗಕ್ಕೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.
ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತಿದ್ದರೆ, ಹೆಚ್ಚಿನ ಸಲಹೆಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಆಹಾರ ಪದ್ಧತಿ: ಮೀನು, ಮೊಟ್ಟೆ, ಬಲವರ್ಧಿತ ಡೈರಿ ಉತ್ಪನ್ನಗಳು ಮತ್ತು ಅಣಬೆಗಳಂತಹ ಆಹಾರಗಳು ವಿಟಮಿನ್ ಡಿ ಹೆಚ್ಚಿಸಲು ಸಹಾಯ ಮಾಡುತ್ತವೆ.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು: ವಾರದಲ್ಲಿ ಕೆಲವು ಬಾರಿ 10 ರಿಂದ 30 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕಳೆಯುವುದರಿಂದ ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.