ಹೊಳೆಯಲ್ಲಿದ್ದ ಮೀನು ವ್ಯಕ್ತಿಯ ಬಾಯಿಯೊಳಗೆ! ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಯುವಕ ಸಾವು

ವಿಜಯವಾಣಿ - 2025-04-10T093340.213
Published on

ತಮಿಳುನಾಡು: ಹೊಳೆಯಲ್ಲಿ ಈಜಾಡುತ್ತಿದ್ದ ಮೀನು ಗಂಟಲಿನೊಳಗೆ ಸಿಕ್ಕಿಕೊಂಡ ಹಿನ್ನೆಲೆ ಯುವಕ (26) ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಸಂಭವಿಸಿದೆ. ಮಧುರಾಂತಕಂ ಪ್ರದೇಶದ ಬಳಿ ಮೀನು ಹಿಡಿಯುತ್ತಿದ್ದ ಈತ, ಕೈಗೆ ಸಿಕ್ಕ ದಪ್ಪದಾದ ಮೀನನ್ನು ಸರಿಯಾಗಿ ಹಿಡಿಯುವ ವೇಳೆ ಆದ ಎಡವಟ್ಟಿನಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಮೃತ ಯುವಕನನ್ನು ಅರಾಯಪಕ್ಕಂ ಗ್ರಾಮದ ಮಣಿಗಂಡನ್ ಎಂದು ಗುರುತಿಸಲಾಗಿದೆ. ಬರಿಗೈನಿಂದ ಮೀನು ಹಿಡಿಯುವ ಅಭ್ಯಾಸ ಹೊಂದಿದ್ದ ದಿನಗೂಲಿ ಕಾರ್ಮಿಕ ಮಣಿ, ಕಡಿಮೆ ನೀರಿನ ಮಟ್ಟ ಹೊಂದಿದ್ದ ಕೀಝವಲಂ ಹೊಳೆಗೆ ಎಂದಿನಂತೆ ಮೀನು ಹಿಡಿಯಲು ತೆರಳಿದ್ದ. ಈ ವೇಳೆ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಣಿಗಂಡನ್ ಒಂದು ಮೀನನ್ನು ಹಿಡಿದಿದ್ದ ಮತ್ತು ಇನ್ನೊಂದು ಮೀನನ್ನು ಕಂಡ ಕೂಡಲೇ ಅದು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಮೊದಲು ಹಿಡಿದಿದ್ದ ಮೀನನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡಿದ್ದ ಎಂದಿದ್ದಾರೆ.

ಮೀನಿನ ತಲೆಯನ್ನು ಗಟ್ಟಿಯಾಗಿ ಕಚ್ಚಿಕೊಂಡಿದ್ದ ಮಣಿ, ಅದು ತಪ್ಪಿಸಿಕೊಳ್ಳದಂತೆ ಹಿಡಿದಿಟ್ಟಿದ್ದ. ಆದ್ರೆ, ಗಾತ್ರದಲ್ಲಿ ದೊಡ್ಡದಿದ್ದ ಈ ಮೀನು, ಏಕಾಏಕಿ ಆತನ ಗಂಟಲಿನೊಳಗೆ ಹೋಗಿ ಸಿಲುಕಿತು. ಅವನ ಸುತ್ತಮುತ್ತಲಿನವರು ಸಹಾಯ ಮಾಡಲು ಧಾವಿಸಿದರು ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ತಕ್ಷಣವೇ ಮಣಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿ ಮಧ್ಯೆಯೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಸ್ಥಳೀಯರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net