

IPL: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಉತ್ತಮ ಆಲ್ರೌಂಡ್ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ ಮಿಂಚುತ್ತಿದೆ.
ಕೇವಲ ಭಾರತೀಯ ಕ್ರಿಕೆಟ್ ಪ್ರಿಯರು ಮಾತ್ರವಲ್ಲದೇ ಇತರೆ ದೇಶಗಳಲ್ಲಿಯೂ ಸಹ ಐಪಿಎಲ್ ನೋಡುವವರ ಸಂಖ್ಯೆ ಹೆಚ್ಚಿದೆ. ಆಯಾ ಫ್ರಾಂಚೈಸಿಗಳ ಫ್ಯಾನ್ಸ್ ಹೊರ ದೇಶಗಳಲ್ಲಿಯೂ ಇದ್ದಾರೆ ಎಂಬುದು ಹುಬ್ಬೇರಿಸುವ ಸಂಗತಿ. ಈ ಮಧ್ಯೆ ಐಪಿಎಲ್ ಕುರಿತು ಮಾತನಾಡಿರುವ ಪಾಕಿಸ್ತಾನದ ವೇಗಿ ಹಸನ್ ಹಲಿ, ಭಾರತೀಯ ಐಪಿಎಲ್ಗಿಂತಲೂ ಹೆಚ್ಚಾಗಿ ಜನರು ಪಿಎಸ್ಎಲ್ನ ನೋಡುತ್ತಾರೆ ಎಂದಿದ್ದಾರೆ.
ಇದೇ ಏ.11ರಿಂದ ಆರಂಭವಾಗಲಿರುವ ಪಾಕಿಸ್ತಾನ ಸೂಪರ್ ಲೀಗ್ಗೆ ಅಧಿಕೃತ ಚಾಲನೆ ಸಿಗಲಿದ್ದು, ಇಸ್ಲಾಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಕ್ವಾಲೆಂಡರ್ಸ್ ತಂಡಗಳು ಶುಭಾರಂಭ ಪಂದ್ಯದಲ್ಲಿ ಮುಖಾಮುಖಿಯಾಗಿ ಸೆಣಸಲಿವೆ. ಈ ವಿಷಯವನ್ನು ಮುಂದಿಟ್ಟು ಐಪಿಎಲ್ ಅನ್ನು ಟೀಕಿಸಿದ ಅಲಿ, "ನಮ್ಮಲ್ಲಿ ಉತ್ತಮ ಪ್ರದರ್ಶನಗಳು ಕಾಣಲು ಸಿಕ್ಕರೆ ಎಲ್ಲರೂ ಪಿಎಸ್ಎಲ್ನ ಮಾತ್ರ ನೋಡುತ್ತಾರೆ. ಆಗ ಐಪಿಎಲ್ಗೆ ಕಿಮ್ಮತ್ತು ಇರೋದಿಲ್ಲ" ಎಂದು ಹೇಳಿದ್ದಾರೆ.
"ಪಿಎಸ್ಎಲ್ ಮತ್ತು ಐಪಿಎಲ್ ನಡುವೆ ದೊಡ್ಡ ಸಮರವಿದೆ. ಅದು ವೀಕ್ಷಕರ ವಿಷಯದಲ್ಲಿ. ಉತ್ತಮ ಪ್ರದರ್ಶನ ಮತ್ತು ಮನರಂಜನಾತ್ಮಕ ಅಂಶಗಳು ಮಾತ್ರ ನೋಡುಗರನ್ನು ಸೆಳೆಯಲು ಸಾಧ್ಯ. ಇದು ಸಂಭವಿಸಿದರೆ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ನಾವು ಅತ್ಯುತ್ತಮವಾಗಿ ಆಡಿದರೆ ಖಂಡಿತ ಜನ ಐಪಿಎಲ್ನ ಮರೆತು ಬಿಡುತ್ತಾರೆ. ಸದ್ಯದ ಮಟ್ಟಿಗೆ ಇದೆಲ್ಲ ಪಿಎಸ್ಎಲ್ ಮೇಲೆ ನಿಂತಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).