ವರ್ಷದಿಂದ ವರ್ಷಕ್ಕೆ ಮೀನಿನ ಸಂತಾನೋತ್ಪತ್ತಿ ಕ್ಷೀಣ

agri vv
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಡಾ.ಸಿ.ವಾಸುದೇವಪ್ಪ ಉದ್ಘಾಟಿಸಿದರು. ಡಾ.ಆರ್.ಸಿ.ಜಗದೀಶ, ಡಾ.ಎಲ್.ಎಂ.ಮೂರ್ತಿ, ಡಾ.ಜೆ.ಕೆ.ಜೇನಾ ಮುಂತಾದವರಿದ್ದರು.
Published on

ಶಿವಮೊಗ್ಗ: ಹವಾಮಾನ ಬದಲಾವಣೆಯಿಂದಾಗಿ ಮೀನಿನ ಸಂತಾನೋತ್ಪತ್ತಿ ಕಡಿಮೆಯಾಗುತ್ತಿದ್ದು, ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಮೀನಿನ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ (ಮೀನುಗಾರಿಕೆ) ಡಾ. ಜೆ.ಕೆ. ಜೇನಾ ಕಳವಳ ವ್ಯಕ್ತಪಡಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಮಂಗಳವಾರ ಏರ್ಪಡಿಸಿದ್ದ ಬದಲಾಗುತ್ತಿರುವ ಹವಾಮಾನ ವೈಪರೀತ್ಯದಲ್ಲಿ ಮೀನುಗಾರಿಕೆ ವಿಜ್ಞಾನದ ದೃಷ್ಟಿಕೋನಗಳು, ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪರಿಸರದ ಬದಲಾವಣೆ ನಿಯಂತ್ರಿಸುವುದು ನಮ್ಮ ಕೈಯಲ್ಲಿಲ್ಲ. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವಂತಹ ಮೀನಿನ ತಳಿಗಳನ್ನು ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯ. ಇದರ ಜತೆಗೆ ಮೀನುಗಾರಿಕೆ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ಎಲ್ಲ ವಿಜ್ಞಾನಿಗಳು ಕೈಜೋಡಿಸಬೇಕೆಂದರು.

ವಿಶ್ರಾಂತ ಕುಲಪತಿ ಡಾ.ಸಿ.ವಾಸುದೇವಪ್ಪ ಮಾತನಾಡಿ, ಹವಮಾನ ಬದಲಾವಣೆಯಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದ್ದು, ಇದು ಮೀನು ಕೃಷಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೀನುಗಾರಿಕೆಯಲ್ಲಿ ನೀರಿನ ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಮೀನುಗಾರಿಕೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಂ.ಮೂರ್ತಿ ಮಾತನಾಡಿ, ಮೀನು ಉತ್ಪನ್ನಗಳನ್ನು ಪ್ರಾದೇಶಿಕ ಮಾರುಕಟ್ಟೆ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವುದು ಇಂದಿನ ಅಗತ್ಯ. ಈಗಾಗಲೇ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು ದೇಶದ ವಿವಿಧೆಡೆ 11 ಜಲಕೃಷಿ ಪಾರ್ಕ್ ನಿರ್ಮಾಣ ಮಾಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಿರಿಯ ವಿಜ್ಞಾನಿ, ಯುವ ವಿಜ್ಞಾನಿ, ಯುವ ವಿಸ್ತರಣಾ ವಿಜ್ಞಾನಿ, ಅತ್ಯುತ್ತಮ ಶಿಕ್ಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net