VIDEO: ಗೋಡೆ ಹತ್ತಿ ಕಟ್ಟೆ ಮೇಲೆ ಕುಳಿತ ಹಳದಿ ಮೀನು...! ಇಂತಹ ವಿಚಿತ್ರ ವಿಡಿಯೋ ನೀವು ಯಾವಾಗಾದ್ರೂ ನೋಡಿದ್ರಾ?

Fish 3 Feb 20
Published on

ನೀರಿನೊಳಗೆ ಮೀನುಗಳ ಸಂಚಾರ ನೋಡುವುದೇ ಚೆಂದ. ಒಂದು ಕ್ಷಣದಲ್ಲಿ ಫಟ್​ ಅಂತ ಅತ್ತಲಿಂದ ಇತ್ತಲಿಗೆ, ಇತ್ತಲಿಂದ ಅತ್ತಲಿಗೆ ಓಡಾಡುತ್ತವೆ. ಆದರೆ ನೀರಿನಿಂದ ಹೊರಗೆ ತೆಗೆಯುತ್ತಲೇ ವಿಲವಿಲ ಒದ್ದಾಡಿ ಜೀವವನ್ನೇ ಬಿಡುತ್ತವೆ.

ಈಗ ಹಳದಿ ಬಣ್ಣದ ಪುಟ್ಟ ಮೀನೊಂದು ಗೋಡೆಯನ್ನು ಹತ್ತಿದ ವಿಡಿಯೋವೊಂದು ಎಲ್ಲೆಡೆ ವೈರಲ್​ ಆಗಿದೆ. ಇದೊಂದು ತುಂಬ ವಿಚಿತ್ರ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ರೆಡ್ಡಿಟ್​ ಸೋಷಿಯಲ್​ ನೆಟ್ವರ್ಕ್​ ಮೀಡಿಯಾದಲ್ಲಿ ವಿಡಿಯೋ ಶೇರ್ ಆಗಿದೆ. ಮೀನು ಗೋಡೆ ಹತ್ತೋದಾ ! ಇದೊಂದು ಪಕ್ಕಾ ಅಸಹಜ ಎನ್ನಿಸಬಹುದು. ಆದರೆ ಅದನ್ನು ಈ ಮೀನು ಮಾಡಿ ತೋರಿಸಿದೆ.

ಒಂದು ಕೊಳವಿದೆ. ಅದಕ್ಕೆ ಸಿಮೆಂಟ್​ ಕಟ್ಟೆಯನ್ನು ಕಟ್ಟಲಾಗಿದೆ. ಆ ಕಟ್ಟೆಯ ಗೋಡೆ ಮೇಲೆಲ್ಲ ನೀರು ಹರಿಯುತ್ತಿದೆ. ಕೊಳದಲ್ಲಿದ್ದ ಮೀನು ಮೇಲಿನಿಂದ ಬೀಳುವ ನೀರಿನ ಮೂಲಕವೇ ಗೋಡೆಯನ್ನು ಹತ್ತಿ ಕಟ್ಟೆಯ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಆದರೆ ಅಲ್ಲೆಲ್ಲ ನೀರು ಹರಿಯುತ್ತಿರುವ ಕಾರಣ ಮೀನಿನ ಜೀವಕ್ಕೆ ಯಾವುದೇ ಅಪಾಯವಾಗಲಿಲ್ಲ.

ವಿಡಿಯೋ ಶೇರ್ ಮಾಡಿದ ರೆಡ್ಡಿಟ್ ಬಳಕೆದಾರ ಈ ಮೀನು ಮುಂದೆ ಡ್ರ್ಯಾಗನ್​ ಆಗಿ ಬದಲಾಗುತ್ತದೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ವಿಡಿಯೋ ನೋಡಿದ ಬಹುತೇಕ ಎಲ್ಲರೂ ತುಂಬ ಅಚ್ಚರಿ ವ್ಯಕ್ತಪಡಿಸಿದ್ದಾರೆ.  ಅನೇಕರ ಅಭಿಪ್ರಾಯವೆಂದರೆ ಇದು ಮೀನು ಅಲ್ಲ. ಮುಂದೆ ಡ್ರ್ಯಾಗನ್​ ಆಗಿ ವಿಕಸನಗೊಳ್ಳುವ ಜೀವಿ ಎನ್ನುವುದೇ ಆಗಿದೆ.

ಆದರೆ ಮೀನು ಗೋಡೆ ಹತ್ತುವ ವಿಡಿಯೋ ವೈರಲ್​ ಆಗಿದ್ದು ಇದೇ ಮೊದಲಲ್ಲ. 2015ರಲ್ಲಿ ಕೂಡ ಕ್ಯಾಟ್​ಫಿಷ್​ವೊಂದು ಗೋಡೆಯನ್ನು ಹತ್ತಿದ್ದು ಚಿತ್ರಿತವಾಗಿತ್ತು. ಆದರೆ ಈಗ ಗೋಡೆ ಹತ್ತಿದ ಬೆಕ್ಕು ಯಾವ ಪ್ರಭೇದಕ್ಕೆ ಸೇರಿದ್ದು ಎಂಬುದು ಇನ್ನೂ ಗೊತ್ತಾಗಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net