

| ದೇವರಾಜ ಕನಕಪುರ ಬೆಂಗಳೂರು
ಮೌಲ್ಯಮಾಪನದಲ್ಲಿ ಪಾರದರ್ಶಕತೆ ಹಾಗೂ ಶೀಘ್ರ ಫಲಿತಾಂಶ ನೀಡುವ ಉದ್ದೇಶದಿಂದ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಗೆ ಮುಂದಾಗಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಕೂಡ ಈ ರೀತಿ ಡಿಜಿಟಲ್ ವ್ಯವಸ್ಥೆ ಹೊಂದಿಲ್ಲ. ದೇಶದಲ್ಲಿ ಮೊದಲ ಬಾರಿಗೆ ಕೆಪಿಎಸ್ಸಿ ಈ ವ್ಯವಸ್ಥೆ ಜಾರಿಗೆ ತರುತ್ತಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದ್ದು, ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಉಳಿದ ಪರೀಕ್ಷೆಗಳಿಗೂ ಅನ್ವಯಿಸಲು ಆಯೋಗ ಮುಂದಾಗಿದೆ. ಈವರೆಗೆ ಕೆಪಿಎಸ್ಸಿ ಮೌಲ್ಯಮಾಪಕರಿಗೆ ಉತ್ತರ ಪತ್ರಿಕೆಯನ್ನು ನೇರವಾಗಿ ನೀಡಿ ಮೌಲ್ಯಮಾಪನ ಮಾಡಿಸುತ್ತಿತ್ತು. ಇನ್ನುಮುಂದೆ ಮೌಲ್ಯಮಾಪಕರಿಗೆ ಉತ್ತರ ಪತ್ರಿಕೆಯು ಕಂಪ್ಯೂಟರ್ ಪರದೆ ಮೇಲೆ ಸ್ಕಾ್ಯನ್ ಪ್ರತಿ ನೀಡಲಿದ್ದು, ಇದನ್ನೇ ನೋಡಿ ಪಕ್ಕದಲ್ಲೇ ಅಂಕಗಳನ್ನು ನಮೂದಿಸುವ ಡಿಜಿಟಲ್ ಮೌಲ್ಯಮಾಪನದ ವ್ಯವಸ್ಥೆ ಜಾರಿಗೆ ಬರಲಿದೆ. ಈ ಸಂಬಂಧ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ತಂತ್ರಜ್ಞಾನವನ್ನು ಕೆಪಿಎಸ್ಸಿ ರೂಪಿಸಿದೆ.
ವಿವರಣಾ ಉತ್ತರ: ಕೆಪಿಎಸ್ಸಿಯು ಸಾಮಾನ್ಯವಾಗಿ, ಹೆಚ್ಚಿನ ಪರೀಕ್ಷೆಗಳಲ್ಲಿ ಬಹು ಆಯ್ಕೆ ಮಾದರಿ (ಎಂಸಿಕ್ಯೂ) ಪ್ರಶ್ನೆಪತ್ರಿಕೆ ರೂಪಿಸುತ್ತದೆ. ಅಂದರೆ, ವಿದ್ಯಾರ್ಥಿಗಳು 4 ಉತ್ತರಗಳ ಪೈಕಿ ಒಂದನ್ನು ಆಯ್ಕೆ ಮಾಡಿದರೆ ಸಾಕು. ಆದರೆ, ಇತರ ‘ಎ’ ಮತ್ತು ‘ಬಿ’ ಶ್ರೇಣಿಯ ಹುದ್ದೆಗಳಲ್ಲಿ ಪ್ರಶ್ನೆಪತ್ರಿಕೆ ಸ್ವರೂಪ ಬದಲಾಗಿರುತ್ತದೆ. ಪರೀಕ್ಷೆಗಳಲ್ಲಿ ವಿವರಣಾತ್ಮಕವಾದ ಪ್ರಶ್ನೆಗಳನ್ನು ರೂಪಿಸುತ್ತದೆ. ಇದರಿಂದಾಗಿ ಅಭ್ಯರ್ಥಿಗಳು ಉತ್ತರಗಳನ್ನು ವಿಸ್ತಾರವಾಗಿ ಬರೆಯಬೇಕಾಗಿರುತ್ತದೆ.
ಹಳೇ ಪದ್ಧತಿ: ಸದ್ಯ ಚಾಲ್ತಿಯಲ್ಲಿರುವ ಪದ್ಧತಿ ಪ್ರಕಾರ, ಉತ್ತರ ಪತ್ರಿಕೆಗಳ ಮೇಲಿರುವ ಅಭ್ಯರ್ಥಿಗಳ ಮಾಹಿತಿ ತೆಗೆದು ಉತ್ತರ ಪತ್ರಿಕೆ ಮಾತ್ರ ಮೌಲ್ಯಮಾಪಕರಿಗೆ ನೀಡಲಾಗುತ್ತದೆ. ಮೌಲ್ಯಮಾಪಕರು ಉತ್ತರ ಪತ್ರಿಕೆಯ ಮಾದರಿ ನೋಡಿಕೊಂಡು ಮೌಲ್ಯಮಾಪನ ಮಾಡಿ ಅಲ್ಲೇ ಅಂಕಗಳನ್ನು ನೀಡುತ್ತಾರೆ. ಆನಂತರ ಆ ಅಂಕಗಳನ್ನು ಲೆಕ್ಕಹಾಕಿ ಅಭ್ಯರ್ಥಿಗಳ ಫಲಿತಾಂಶವನ್ನು ಆಯೋಗ ಪ್ರಕಟಿಸುತ್ತದೆ.
ಡಿಜಿಟಲ್ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕಾ್ಯನ್ ಮಾಡಿ ಅಭ್ಯರ್ಥಿಗಳ ಮಾಹಿತಿ ತೆಗೆದು, ಕೇವಲ ಉತ್ತರ ಪತ್ರಿಕೆಯನ್ನು ರಾಜ್ಯದ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸುತ್ತದೆ. ಪ್ರತಿ ಮೌಲ್ಯಮಾಪಕರಿಗೆ ಪ್ರತ್ಯೇಕ ಬಯೋಮೆಟ್ರಿಕ್, ಕಂಪ್ಯೂಟರ್ ಲಾಗಿನ್ ಮತ್ತು ಪಾಸ್ವರ್ಡ್ ನೀಡಲಾಗಿರುತ್ತದೆ. ಆ ಮೂಲಕ ಮೌಲ್ಯಮಾಪನ ತಂತ್ರಾಂಶಕ್ಕೆ ಅಪ್ಲೋಡ್ ಆಗಲಿದೆ. ಮೌಲ್ಯಮಾಪಕರು ಕಂಪ್ಯೂಟರ್ ಪರದೆ ಮೇಲೆ ಬರುವ ಉತ್ತರ ಪತ್ರಿಕೆಯನ್ನು ನೋಡಿ ಅಲ್ಲೇ ಪಕ್ಕದಲ್ಲಿ ನೀಡುವ ಬಾಕ್ಸ್ನಲ್ಲಿ ಅಂಕಗಳನ್ನು ನಮೂದಿಸಬೇಕಿರುತ್ತದೆ. ಅಂಕ ನೀಡುವುದನ್ನು ಮರೆತಲ್ಲಿ, ಮುಂದೆ ಹೋಗುವುದೇ ಇಲ್ಲ. ಟ್ಯಾಂಪರ್ ಮಾಡಲು ಪ್ರಯತ್ನಿಸಿದಲ್ಲಿ ಸಿಕ್ಕಿ ಬೀಳಬೇಕಾಗುತ್ತದೆ.
ಆನ್ಲೈನ್ ಮೌಲ್ಯಮಾಪನ ಮಾಡುವುದರಿಂದ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದು ತಪ್ಪಲಿದೆ.
| ನೀಲು ರಂಗನಾಥ್ ಎಸಿಎಫ್ ಪರೀಕ್ಷೆ ಬರೆದ ಅಭ್ಯರ್ಥಿ