ಜನಸ್ನೇಹಿ ಆಡಳಿತಕ್ಕೆ ಮೊದಲ ಆದ್ಯತೆ: ಸಚಿವ ಸಂತೋಷ ಲಾಡ್

Published on

ಧಾರವಾಡ: ಜನಸ್ನೇಹಿ ಆಡಳಿತಕ್ಕೆ ನನ್ನ ಮೊದಲ ಆದ್ಯತೆ. ಅದಕ್ಕೆ ಪೂರಕವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡಬೇಕು. ಜನರ ಸೇವೆಗೆ ಬದ್ಧನಾಗಿದ್ದು, ಅಧಿಕಾರಿಗಳು ಬೆಂಬಲವಾಗಿ ನಿಲ್ಲಬೇಕು ಎಂದು ಸಚಿವ ಸಂತೋಷ ಲಾಡ್ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸರಿಯಾದ ಹೊಂದಾಣಿಕೆ ಇರಬೇಕು. ಕೃಷಿ- ಕೃಷಿಯೇತರ ಜಮೀನು, ಕೊಳವೆ ಬಾವಿಗಳು, ಅವುಗಳಿಗೆ ವಿದ್ಯುತ್ ಸಂಪರ್ಕದ ಅಂಕಿ- ಅಂಶಗಳು ತಾಳೆಯಾಗಬೇಕು. ಕಲಘಟಗಿ ತಾಲೂಕಿನಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ 27 ಕೋಟಿ ರೂ. ವೆಚ್ಚದಲ್ಲಿ ಶೇ. 60ರಷ್ಟು ಕಾರ್ಯ ಮುಗಿದಿದ್ದು, ರಸ್ತೆಗಳನ್ನು ಮೊದಲಿದ್ದ ರೀತಿ ನಿರ್ವಿುಸಬೇಕು. ಅಪೂರ್ಣ ಕಾಮಗಾರಿಯಾದರೆ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಕ್ಷೇತ್ರದಲ್ಲಿ 560 ಕಿ.ಮೀ. ರಸ್ತೆ ಅಭಿವೃದಿಟಛಿಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.

ಕ್ಷೇತ್ರದ ದೊಡ್ಡ ಕೆರೆಗಳಾದ ನಿಗದಿ ಹಾಗೂ ಮುಗದ ಕೆರೆಗಳ ರಕ್ಷಣೆ ಹಾಗೂ ಸೌಂದಯೀಕರಣಕ್ಕೆ ಯೋಜನೆ ರೂಪಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಲಘಟಗಿ ತಾಲೂಕಿನ ಒಟ್ಟು ಜಲಾನಯನ ಕ್ಷೇತ್ರವನ್ನು ಸಮೀಕ್ಷೆ ಮಾಡುವಂತೆ ಉಪ ವಿಭಾಗಾಧಿಕಾರಿ ಅಶೋಕ ತೇಲಿಗೆ ತಿಳಿಸಿದರು.

ಜನಪರ ಆಡಳಿತ ನೀಡುವುದು ನೌಕರರ ಕರ್ತವ್ಯ. ಅದನ್ನು ಬಿಟ್ಟು ಟೇಬಲ್ ಮೇಲೆ- ಕೆಳಗಿನ ವ್ಯವಹಾರ ಮಾಡಲು ಯತ್ನಿಸಿದರೆ ಸಹಿಸುವುದಿಲ್ಲ. ತಾಳ್ಮೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಅಗತ್ಯಗಳನ್ನು ಪೂರೈಸಬೇಕು. ಬದಟಛಿತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಅನಿರೀಕ್ಷಿತ ಭೇಟಿ ನೀಡಲಿದ್ದು, ಅವ್ಯವಹಾರಗಳು ಕಂಡುಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಉಪ ವಿಭಾಗಾಧಿಕಾರಿ ಅಶೋಕ ತೇಲಿ, ತಹಸೀಲ್ದಾರ್ ಡಾ. ಮೋಹನ ಭಸ್ಮೆ, ತಾಪಂ ಇಒ ಗಂಗಾಧರ ಕಂದಕೂರ ವೇದಿಕೆಯಲ್ಲಿದ್ದರು.

ಸಮಸ್ಯೆ ಇತ್ಯರ್ಥಪಡಿಸಿ

ಬೇಲೂರು ಕೈಗಾರಿಕಾ ಪ್ರದೇಶದ ಟಾಟಾ ಮಾಕೋಪೋಲೊ ಕಂಪನಿಯ ನೂರಾರು ನೌಕರರನ್ನು ಲಖನೌಗೆ ವರ್ಗಾವಣೆ ಮಾಡಿದ ಪ್ರಕರಣ ಸಭೆಯಲ್ಲಿ ಚರ್ಚೆಗೆ ಬಂತು. ಕಂಪನಿಯ ಅಧಿಕಾರಿಯನ್ನು ಕರೆಸಿದ ಸಚಿವ ಲಾಡ್, ಈ ಪ್ರಕರಣದಲ್ಲಿ ಯಾರೊಬ್ಬರಿಗೂ ಅನ್ಯಾಯವಾಗಬಾರದು. ಕೂಡಲೇ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಸಂಧಾನ ಸಭೆ ಜರುಗಿಸಿ ಸೌಹಾರ್ದತೆಯಿಂದ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ವನಮಹೋತ್ಸವ ದಾಖಲೆ ಮಾಡೋಣ

ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಸಚಿವ ಲಾಡ್, ಒಂದೇ ದಿನ ಗರಿಷ್ಠ ಸಸಿ ನೆಟ್ಟು ದಾಖಲೆ ಇರುವ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಮುಂದಿನ ಪರಿಸರ ದಿನದಂದು ಜಿಲ್ಲೆಯಲ್ಲಿ ಅಂದಾಜು 50 ಲಕ್ಷ ಮೌಲ್ಯದ ಸಸಿಗಳನ್ನು ನೆಟ್ಟು ದಾಖಲೆ ಮಾಡೋಣ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net