

ನವದೆಹಲಿ: ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ನಾನಕ್ಪುರದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಹ್ಯಾಪಿನೆಸ್ ಕ್ಲಾಸ್ನಲ್ಲಿ ಪಾಲ್ಗೊಂಡರು.
ಮೆಲಾನಿಯಾ ಅವರಿಗೆ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಸ್ವಾಗತ ಸಿಕ್ಕಿತು. ಪುಟ್ಟ ಪುಟ್ಟ ಮಕ್ಕಳು ಎರಡೂ ದೇಶಗಳ ಧ್ವಜವನ್ನು ಹಿಡಿದು ಸಾಲಾಗಿ ನಿಂತು ಮೆಲಾನಿಯಾ ಅವರನ್ನು ಬರಮಾಡಿಕೊಂಡರು. ಅವರಲ್ಲಿ ಓರ್ವ ಬಾಲಕಿ ಮೆಲಾನಿಯಾ ಅವರಿಗೆ ಹೂಗುಚ್ಛವನ್ನು ಕೊಟ್ಟು, ಆರತಿ ಮಾಡಿ, ಅವರ ಹಣೆಗೆ ತಿಲಕವನ್ನು ಇಟ್ಟಳು.
ಬಳಿಕ ಶಾಲೆಯ ಒಳಗೆ ಮೆಲಾನಿಯಾ ಎದುರಲ್ಲೇ ಶಿಕ್ಷಕಿ ಮಕ್ಕಳಿಗೆ ಹ್ಯಾಪಿನೆಸ್ ಕ್ಲಾಸ್ನಲ್ಲಿ ಪಾಠ ಮಾಡಿದರು. ಚಿಕ್ಕ ಮಕ್ಕಳೊಂದಿಗೆ ಸರಳವಾಗಿ ಬೆರೆತ ಅಮೆರಿಕ ಫಸ್ಟ್ ಲೇಡಿ, ಅವರೊಂದಿಗೆ ಸಂವಾದವನ್ನೂ ನಡೆಸಿದರು. ಮಕ್ಕಳ ಚಟುವಟಿಕೆಗಳನ್ನು ಗಮಿಸಿದರು.
ಸುಮಾರು 15-20 ನಿಮಿಷಗಳ ಕಾಲ ಮಕ್ಕಳು, ಶಿಕ್ಷಕರೊಂದಿಗೆ ಮೆಲಾನಿಯಾ ಕಾಲಕಳೆದರು. ಮೆಲಾನಿಯಾ ಅವರಿಗೆ ಇಬ್ಬರು ಬಾಲಕಿಯರು ಸೇರಿ ಮಾಲೆಯನ್ನು ಹಾಕಿ, ಅವರ ಕೈ ಹಿಡಿದು ನಡೆದು ಸಾಂಸ್ಕೃತಿಕ ಕಾರ್ಯಕ್ರ ನಡೆಯುವ ವೇದಿಕೆಗೆ ಕರೆತಂದರು. ಮೆಲಾನಿಯಾ ಅವರ ಎದುರು ಚಿಣ್ಣರು ಜಾನಪದ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು.