

ಬೆಂಗಳೂರು: ರಾಜ್ಯದಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದ್ದು, ಮೊದಲ ದಿನ 4.03 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಆ ಮೂಲಕ ಶೇ. 63 ಗುರಿ ಸಾಧನೆ ಮಾಡಲಾಗಿದೆ. ಸೋಮವಾರ ರಾಜ್ಯಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ 6,38,891 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ (ಸಂಜೆ 7.30ರವರೆಗೂ) 4,03,928 ಮಕ್ಕಳಿಗೆ ಲಸಿಕೆ ವಿತರಿಸಲಾಗಿದೆ. ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸಿನ್ ಹಾಕಿರುವುದರಿಂದ 28 ದಿನಗಳ ನಂತರ ಎರಡನೇ ಡೋಸ್ ನೀಡಲಾಗುವುದು.
ಅಭಿಯಾನದಲ್ಲಿ ರಾಜ್ಯಾದ್ಯಂತ 4 ಸಾವಿರ ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಯಿತು. ಯಾದಗಿರಿ ಶೇ.24, ಮೈಸೂರು ಶೇ.25, ಬೆಂಗಳೂರು ನಗರ ಶೇ.28, ಚಿಕ್ಕಬಳ್ಳಾಪುರ ಶೇ.33, ಕೊಪ್ಪಳ ಶೇ.34, ಬಳ್ಳಾರಿ ಶೇ.36, ಹಾವೇರಿ ಶೇ.39, ವಿಜಯಪುರ ಮತ್ತು ಗದಗ ತಲಾ ಶೇ.40, ರಾಯಚೂರು ಶೇ.47 ನಿಗದಿತ ಗುರಿಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಹಾವೇರಿ ಶೇ.281, ಬೆಳಗಾವಿ ಶೇ.239, ಧಾರವಾಡ ಶೇ.229, ಕೋಲಾರ ಶೇ.197, ಚಿಕ್ಕಮಗಳೂರು ಶೇ.136, ಹಾಸನ ಶೇ.133, ಕಲಬುರಗಿ ಶೇ.113, ಉತ್ತರ ಕನ್ನಡ ಶೇ.107, ಉಡುಪಿ ಶೇ.105 ಹಾಗೂ ಕೊಡಗು ಶೇ.103 ನಿಗದಿತ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಣೆಯಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.56 ವಿತರಣೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ದಿನ 40 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಕೇವಲ 22,505 ಮಕ್ಕಳಿಗೆ ಲಸಿಕೆ ವಿತರಿಸುವ ಮೂಲಕ ಶೇ.56 ಗುರಿ ತಲುಪಿದೆ. 255 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಯಿತು.
ಒಮಿಕ್ರಾನ್ ಭೀತಿ ನಡುವೆಯೂ ಪಾದಯಾತ್ರೆ ಗಾಗಿ ಕಾಂಗ್ರೆಸ್ ನಡೆಸುತ್ತಿರುವ ಸಿದ್ಧತೆಗಳನ್ನು ಗಮನಿಸುತ್ತಿರುವೆ. ಸಾರ್ವತ್ರಿಕ ನಡವಳಿಕೆ ಬಗ್ಗೆ ರ್ಚಚಿಸಿ ತೆಗೆದುಕೊಳ್ಳುವ ತೀರ್ಮಾನ ಸಾರ್ವಜನಿಕರ ಜತೆಗೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗುತ್ತದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಮಾಸ್ಕ್ ಬಿಟ್ಟು ತಿರುಗಾಡುತ್ತಿದ್ದೇವೆ. ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿರುವುದರಿಂದ 2ನೇ ಅಲೆಯಲ್ಲಿ ಸಂಭವಿಸಿದ ಸಾವು-ನೋವುಗಳು ಆಗಬಾರದೆಂದರೆ ಸಾರ್ವಜನಿಕರು ಸರ್ಕಾರದೊಂದಿಗೆ ಸ್ಪಂದಿಸ ಬೇಕು. ಇಲ್ಲವಾದಲ್ಲಿ ಲಾಕ್ಡೌನ್ ಅನಿವಾರ್ಯ. | ಆರಗ ಜ್ಞಾನೇಂದ್ರ ಗೃಹ ಸಚಿವ 15-18 ವರ್ಷ ವಯಸ್ಸಿನ ಮಕ್ಕಳ ಲಸಿಕಾಭಿಯಾನ ಆರಂಭವಾಗಿದ್ದು, ಮುಂಚೂಣಿ ಕಾರ್ಯಕರ್ತರು ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಮೊದಲ ದಿನ 3,80,133 ಮಕ್ಕಳಿಗೆ ಲಸಿಕೆ ಹಾಕಲು ಸಾಧ್ಯವಾಗಿದೆ. | ಡಿ.ರಂದೀಪ್ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ನವದೆಹಲಿ: ದೇಶದಲ್ಲಿ 15ರಿಂದ 18 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಸೋಮವಾರ ಆರಂಭವಾಯಿತು. ಮಕ್ಕಳ ಲಸಿಕೆ ಅಭಿಯಾನದ ಮೊದಲ ದಿನ ದೇಶದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಹಾಕಲಾಯಿತು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಿಳಿದ್ದಾರೆ. ಕೊವ್ಯಾಕ್ಸಿನ್ ಬಳಕೆಗೆ ಮಾತ್ರವೇ ಅನುಮೋದನೆ ಸಿಕ್ಕಿರುವುದರಿಂದ ಆ ಲಸಿಕೆಯನ್ನೇ ಮಕ್ಕಳಿಗೆ ಹಾಕಲಾಗುತ್ತಿದೆ. ಕೋವಿನ್ ಪೋರ್ಟಲ್ನಲ್ಲಿ ದೇಶದಾದ್ಯಂತದ 27 ಲಕ್ಷಕ್ಕೂ ಅಧಿಕ ಮಕ್ಕಳ ನೋಂದಣಿ ಮಾಡಿಕೊಂಡಿದ್ದು, ನೇರವಾಗಿಯೂ ಲಸಿಕಾ ಕೇಂದ್ರಕ್ಕೆ ಬಂದು ಚುಚ್ಚುಮದ್ದು ಪಡದಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಡಿ.25ರಂದು ಘೋಷಿಸಿದ್ದರು. ವ್ಯಾಕ್ಸಿನ್ ನೀಡಿಕೆಯಿಂದ ಶಾಲೆ- ಕಾಲೇಜ್ಗಳಿಗೆ ಹೋಗುವ ಮಕ್ಕಳು ಹಾಗೂ ಅವರ ಪಾಲಕರ ಚಿಂತೆ ಕಡಿಮೆಯಾಗಲಿದೆ ಎಂದು ಮೋದಿ ಹೇಳಿದ್ದರು. ಸಾಂಕ್ರಾಮಿಕತೆ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ಮಕ್ಕಳಿಗೆ ಲಸಿಕೆ ಹಾಕುವುದರಿಂದ ಶಾಲೆಗಳಲ್ಲಿ ಕಲಿಸುವ ಪ್ರಕ್ರಿಯೆ ಸಹಜಗೊಳ್ಳಲು ನೆರವಾಗುತ್ತದೆ ಎಂದೂ ಅಭಿಪ್ರಾಯಪಟ್ಟಿದ್ದರು.
ಬೆಂಗಳೂರು: ಕರೊನಾ ಸೋಂಕಿನ ಬೆಳವಣಿಗೆ, ಮೂರನೇ ಅಲೆ ಪ್ರವೇಶ ಸಾಧ್ಯತೆ ಮೇಲೆ ತೀವ್ರ ನಿಗಾವಹಿಸಿರುವ ಸರ್ಕಾರ, ಬಿಗಿ ನಿರ್ಬಂಧಗಳ ಪಾಲನೆಗೆ ರಾಜ್ಯದ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುತ್ತಿದೆ. ಶೇ.0.48ರ ಆಸುಪಾಸಿನಲ್ಲಿದ್ದ ಸೋಂಕು ದೃಢತೆ ದರ ಒಂದು ವಾರ ಕಳೆಯುವಷ್ಟರಲ್ಲಿ ಶೇ.1.01ಕ್ಕೆ ಜಿಗಿದು, ಗಂಭೀರತೆಯ ಮುನ್ಸೂಚನೆ ನೀಡಿದೆ. ಈ ನಡುವೆ ಮಹಾರಾಷ್ಟ್ರ, ಕೇರಳ, ದೆಹಲಿ, ಪಶ್ಚಿಮ ಬಂಗಾಳ ಇನ್ನಿತರ ರಾಜ್ಯಗಳಲ್ಲಿ ಸೋಂಕಿನ ಹಾವಳಿ ದಿಢೀರ್ ಹೆಚ್ಚಳದತ್ತ ಗಮನವಿರಿಸಿ, ಜನರ ಸುರಕ್ಷತೆಗೆ ಒತ್ತು ನೀಡಿದೆ. ರಾಜ್ಯ ಹಾಗೂ ನೆರೆ-ಹೊರೆ ಪರಿಸ್ಥಿತಿ ಅವಲೋಕಿಸಿ, ಸಮತೋಲಿತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದ್ದು, ಗುರುವಾರ ಅಂತಿಮ ಸ್ವರೂಪ ಹೊರಬೀಳಲಿದೆ.
ದೊಡ್ಡ ಸವಾಲು: ಮೊದಲ ಅಲೆಯಲ್ಲಿ ಆರೋಗ್ಯ ಪರಿಕರಗಳು, ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಕಟ್ಟಿ ಕಾಡಿದ್ದರೆ, ಮೂರನೇ ಅಲೆ ಯಾವುದಕ್ಕೆ ಬೇಡಿಕೆ ಸೃಷ್ಟಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಅನಿವಾರ್ಯತೆ, ಅಗತ್ಯತೆಗಳನ್ನು ಗೊತ್ತು ಮಾಡಿಕೊಳ್ಳುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಕಾರಣಕ್ಕೆ ಪದೇಪದೆ ತಜ್ಞರತ್ತ ನೋಡುತ್ತಿದೆ. ಎರಡು ಅಲೆಗಳನ್ನು ಕಟ್ಟಿ ಹಾಕುವುದಕ್ಕೆ ಲಾಕ್ಡೌನ್ ವಿಧಿಸಲಾಗಿದೆ. ತತ್ಪರಿಣಾಮ ಜನ-ಜೀವನ, ಆರ್ಥಿಕತೆ, ರಾಜ್ಯದ ಖಜಾನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಮೂರನೇ ಅಲೆಗೆ ಲಗಾಮು ಹಾಕಲು ಮತ್ತದೇ ಲಾಕ್ಡೌನ್ಗೆ ಜೋತು ಬಿದ್ದರೆ, ಆರ್ಥಿಕತೆ ನೆಲಕಚ್ಚಿ ದುಡಿಯುವ ವರ್ಗಗಳ ಬದುಕು ಬೀದಿಪಾಲಾಗುವ ಅಳುಕು ಏಕರೂಪವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸಂಭಾವ್ಯ ಸಂಕಟಕ್ಕೆ ನಡು ಮಾರ್ಗದ ಪರಿಹಾರ ಸೂತ್ರಗಳಿಗೆ ಒಲವು ತೋರಿಸಿದ್ದಾರೆ.
ಸಂಪುಟ ಸಭೆಯಲ್ಲಿ ನಿರ್ಧಾರ: ತಜ್ಞರು ನೀಡಿದ ವರದಿ, ಅವರೊಂದಿಗೆ ನಡೆದ ಸಮಾಲೋಚನೆ ವಿವರಗಳನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವೆ. ಸಚಿವ ಸಹೋದ್ಯೋಗಿಗಳ ಜತೆಗೆ ರ್ಚಚಿಸಿದ ಬಳಿಕ ಜನರ ಜೀವ ಮತ್ತು ಜೀವನ ರಕ್ಷಣೆ, ಆರೋಗ್ಯ ಸವಲತ್ತು ಸುಧಾರಣೆ ಸೇರಿ ದೀರ್ಘಾವಧಿ ಹತೋಟಿ ಕಾರ್ಯತಂತ್ರ ನಿರ್ಧರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ತಜ್ಞರ ಜತೆ ಇಂದು ಚರ್ಚೆ: ಕರೊನಾ ಸೋಂಕಿನ ಬೆಳವಣಿಗೆ, ಎರಡು ಅಲೆಗಳನ್ನು ನಿಭಾಯಿಸಿ ಅನುಭವದ ನೆಲೆಯಲ್ಲಿ ದೀರ್ಘಾವಧಿ ಹತೋಟಿ ಕ್ರಮಗಳ ಬಗ್ಗೆ ಚಿಂತನೆ ನಡೆದಿದ್ದು, ತಾಂತ್ರಿಕ ತಜ್ಞರ ಸಲಹಾ ಸಮಿತಿಯೊಂದಿಗೆ ಮಂಗಳವಾರ ಸಂಜೆ ರ್ಚಚಿಸುವೆ ಎಂದು ಸಿಎಂ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು. ಜನಜೀವನಕ್ಕೆ ತೊಂದರೆಯಾಗಬಾರದು, ಕರೊನಾ ನಿಯಂತ್ರಣಕ್ಕೆ ಬರಬೇಕು. ಅಂತಹ ಸಲಹೆ ಮತ್ತು ಶಿಫಾರಸುಗಳನ್ನು ನೀಡಬೇಕು ಎಂದು ಕೇಳಿಕೊಂಡಿರುವೆ ಎಂದರು. ತಜ್ಞರು ಈಗಾಗಲೆ ಸಲ್ಲಿಸಿರುವ ವರದಿ ಬಗ್ಗೆ ವಿಚಾರ ವಿನಿಯಮದ ವೇಳೆ ಪ್ರಸ್ತಾಪವಾಗಲಿದೆ ಎಂದು ಹೇಳಿದರು.