

Cool Drink: ಕೂಲ್ ಡ್ರಿಂಕ್ಸ್ ಅಂದಾಕ್ಷಣ ಬಹುತೇಕರಿಗೆ ಮೊದಲಿಗೆ ನೆನಪಾಗುವುದೇ ಕೋಕಾ ಕೋಲಾ, ಪೆಪ್ಸಿ, ಮಿರಿಂಡಾ, ಕಾಂಪಾ ಕೋಲಾ ಬ್ರ್ಯಾಂಡ್ಗಳು. ಕಾರಣ, ಅಂದಿನ ಮಟ್ಟಕ್ಕೆ ಹಾಗೂ ಇಂದಿಗೂ ಈ ತಂಪು ಪಾನೀಯಗಳು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಈ ಸಂಸ್ಥೆಗಳ ವ್ಯವಹಾರ-ವಹಿವಾಟು ಇಂದು ಹೆಮ್ಮರವಾಗಿ ನಿಂತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಮಗೆ ಗೊತ್ತಿರದ ಸಂಗತಿಯೊಂದು ಎಲೆಮರೆ ಕಾಯಿಯಂತೆ ಅಡಗಿ ಹೋಗಿದೆ. ಅಸಲಿಗೆ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕೂಲ್ ಡ್ರಿಂಕ್ ಎಂದು ಜನರಿಗೆ ಪರಿಚಯವಾಗಿದ್ದೇ ಇದೊಂದು ಬ್ರ್ಯಾಂಡ್. ಹಾಗಿದ್ರೆ, ನಮಗೆ ಗೊತ್ತಿರದ ಬ್ರ್ಯಾಂಡ್ ಇದ್ಯಾವುದು? ಸಂಸ್ಥಾಪಕರ ಹೆಸರೇನು? ಎಂಬ ನಿಮ್ಮ ಪ್ರಶ್ನೆ, ಗೊಂದಲಕ್ಕೆ ಹೀಗಿದೆ ನೋಡಿ ಉತ್ತರ.
ಪ್ರಸ್ತುತ ಭಾರತವು 150 ವರ್ಷಗಳಿಗೂ ಹಿಂದಿನ ಸೋಡಾ, ತಂಪು ಪಾನೀಯ ಇತಿಹಾಸವನ್ನು ಹೊಂದಿದೆ. ಇದು ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಅಷ್ಟಕ್ಕೂ ಭಾರತಕ್ಕೆ ಮೊದಲು ಕೂಲ್ ಡ್ರಿಂಕ್ಸ್ ಬ್ರ್ಯಾಂಡ್ ಮತ್ತು ರುಚಿಯನ್ನು ಪರಿಚಯಿಸಿದ್ದು ಪುಣೆಯ ಅರ್ದೇಶಿರ್ ಎಂಬ ವ್ಯಕ್ತಿ. ವರದಿಗಳ ಪ್ರಕಾರ, 1800ರ ದಶಕದ ಉತ್ತರಾರ್ಧದಲ್ಲಿ ಇರಾನ್ನ ಯಾಜ್ದ್ನ ಮೂಲದ ಅರ್ದೇಶಿರ್, ಭಾರತಕ್ಕೆ ಬಂದಿಳಿದರು. ಕೇವಲ 8 ರೂ.ಗಳೊಂದಿಗೆ ಮನೆಬಿಟ್ಟು ನಮ್ಮ ದೇಶಕ್ಕೆ ಕಾಲಿಟ್ಟ ಇವರು, ಅಂತಿಮವಾಗಿ ಪುಣೆಯಲ್ಲಿ ವಾಸ್ತವ್ಯ ಹೂಡಿದ್ದರು. ಜೀವನದಲ್ಲಿ ಏನ್ನನ್ನೋ ಸಾಧಿಸಬೇಕು ಎಂಬ ಛಲದಲ್ಲಿದ್ದ ಅರ್ದೇಶಿರ್ಗೆ ಆ ಒಂದು ಘಟನೆ ಜೀವನದ ದಿಕ್ಕನ್ನೇ ಬದಲಾಯಿಸಿತು.
ಒಂದು ಸಂಜೆ, ಬಾರ್ನಲ್ಲಿ ಕುಳಿತಿದ್ದ ಅರ್ದೇಶಿರ್, ತಾವು ಹೇಳಿದ್ದ ಸೋಡ ಬರುವುದು ತಡವಾಯಿತು ಎಂಬ ವಿಚಾರಕ್ಕೆ ಬಾರ್ನೊಳಗೆ ಜಟಾಪಟಿ ನಡೆಸಿದ್ದರು. ಈ ಜಗಳದಲ್ಲಿ ಅವರಿಗೆ ಒಂದು ಐಡಿಯಾ ಹೊಳೆಯಿತು. ಅದೇ ಅವರ ಜೀವನದಲ್ಲಿ ಮಹತ್ವದ ತಿರುವಿಗೆ ಕಾರಣವಾಯಿತು. ಕಾರ್ಬೊನೇಟೆಡ್ ನೀರು, ಸಕ್ಕರೆ ಮತ್ತು ಸುವಾಸನೆಗಳೊಂದಿಗೆ ಸೋಡಾ ತಯಾರಿಸಲು ಅರ್ದೇಶಿರ್ ಪ್ರಯೋಗ ಶುರು ಮಾಡಿದರು. 1884ರಲ್ಲಿ, ಪುಣೆಯಲ್ಲಿ ಬಾಡಿಗೆಗೆ ಪಡೆದಿದ್ದ ಒಂದು ಸಣ್ಣ ಬ್ಯಾರಕ್ನಿಂದ ತಮ್ಮದೇ ಆದ ಸೋಡಾ ಬ್ರ್ಯಾಂಡ್ ಪ್ರಾರಂಭಿಸಿದರು. ಕೋಕಾ-ಕೋಲಾ ಸ್ಥಾಪನೆಗೂ ಎರಡು ವರ್ಷ ಹಿಂದೆಯೇ ಅರ್ದೇಶಿರ್ ತಮ್ಮ ಹೆಸರಿನಲ್ಲೇ "ಅರ್ದೇಶಿರ್" ಎಂಬ ಕೂಲ್ ಡ್ರಿಂಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು.
ಈ ತಂಪು ಪಾನೀಯ ಅಂದು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು ಮತ್ತು ಭಾರತದ ಸ್ವಂತ ಸೋಡಾ ಸಂಸ್ಕೃತಿಗೆ ಹೊಸ ಅಡಿಪಾಯ ಹಾಕಿತು. ಸೋಡಾ ಬ್ರ್ಯಾಂಡ್ಗಳಲ್ಲೇ ಅತೀ ಹೆಚ್ಚು ಮಾರಾಟ ಹಾಗೂ ಖ್ಯಾತಿಯನ್ನು ಗಳಿಸಿತು. ಅದಾದ ಬಳಿಕ ಕೋಕ-ಕೋಲಾ ಕಂಪನಿಗಳ ಅಸ್ತಿತ್ವ ಮುಂದುವರೆಯಿತು. ಬಹುರಾಷ್ಟ್ರೀಯ ಬ್ರ್ಯಾಂಡ್ಗಳು ಭಾರತೀಯ ಮನೆ ಮನೆಗಳಿಗೆ ಪ್ರವೇಶಿಸುವ ಮೊದಲೇ ಜನರನ್ನು ರಿಫ್ರೆಶ್ ಮಾಡುವುದನ್ನು 'ಅರ್ದೇಶಿರ್' ಮುಂದುವರೆಸಿತ್ತು,(ಏಜೆನ್ಸೀಸ್).