

ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಏಳು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಕ್ಷೇತ್ರಗಳಲ್ಲಿ ಶನಿವಾರ ಶೇಕಡ 60ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ನಡೆದಿದ್ದು, ಹಲವು ಜಿಲ್ಲೆಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ರಾಜಧಾನಿ ದೆಹಲಿಯ ಏಳೂ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಉಳಿದ ರಾಜ್ಯಗಳಲ್ಲಿ ಶಾಂತಿಯುತವಾಗಿ ವೋಟಿಂಗ್ ಪ್ರಕ್ರಿಯೆ ನೆರವೇರಿದೆ. ಏಳನೇ ಮತ್ತು ಕೊನೆಯ ಹಂತದ ಚುನಾವಣೆ ಜೂನ್ 1ರಂದು ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
543 ಕ್ಷೇತ್ರಗಳ ಪೈಕಿ 5ನೇ ಹಂತದವರೆಗೆ 429 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ. ಶನಿವಾರ 6ನೇ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಮತದಾನ ನಡೆಯುವ ಮೂಲಕ 487 ಕ್ಷೇತ್ರಗಳ ವೋಟಿಂಗ್ ಸಂಪನ್ನಗೊಂಡಿದೆ. ಏಳನೇ ಹಾಗೂ ಕೊನೆಯ ಹಂತದಲ್ಲಿ 56 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕೇಂದ್ರ ಸಚಿವರಾದ ಧಮೇಂದ್ರ ಪ್ರಧಾನ್, ಕೃಷ್ಣಪಾಲ್ ಸಿಂಗ್ ಗುರ್ಜರ್, ರಾವ್ ಇಂದ್ರಜಿತ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಮನೋಹರ್ ಲಾಲ್ ಖಟ್ಟರ್, ಜಗದಾಂಬಿಕಾ ಪಾಲ್ ಮತ್ತು ಬಿಜೆಪಿ ನಾಯಕರಾದ ಮನೋಜ್ ತಿವಾರಿ, ಮೇನಕಾ ಗಾಂಧಿ, ನವೀನ್ ಜಿಂದಲ್ ಸೇರಿದಂತೆ ಹಲವು ದಿಗ್ಗಜರ ಭವಿಷ್ಯ ಇವಿಎಂನಲ್ಲಿ ಭದ್ರಗೊಂಡಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅತಿಹೆಚ್ಚು 51 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಬಿಜೆಪಿ ಟ್ಯಾಗ್ ಇರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಗಿದೆ ಎಂಬ ತೃಣಮೂಲ ಕಾಂಗ್ರೆಸ್ನ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದ್ದು, ಕಮಿಷನಿಂಗ್ ಮಾಡುವಾಗ, ಸಾಮಾನ್ಯ ವಿಳಾಸದ ಟ್ಯಾಗ್ಗಳಿಗೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟ್ಗಳು ಸಹಿ ಮಾಡಿದ್ದಾರೆ. ಆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರತಿನಿಧಿ ಮಾತ್ರ ಆಯೋಗದ ಸಭಾಂಗಣದಲ್ಲಿ ಉಪಸ್ಥಿತರಿದ್ದದ್ದರಿಂದ ಅವರ ಸಹಿಯನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದೆ.
ಶ್ರೀನಗರ: ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟರನ್ನು ಯಾವುದೇ ಕಾರಣವಿಲ್ಲದೆ ಪೊಲೀಸ್ ಠಾಣೆಗಳಲ್ಲಿ ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಇವಿಎಂಗಳನ್ನು ಟ್ಯಾಂಪರ್ ಮಾಡುವ ಯತ್ನಗಳ ಬಗ್ಗೆ ದೂರುಗಳೂ ಬಂದಿವೆ ಎಂದಿರುವ ಮೆಹಬೂಬಾ, ಶ್ರೀನಗರದ ದಕ್ಷಿಣ ಬಿಜೆಹರಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ತಮ್ಮ ಬೆಂಬಲಿಗರೊಂದಿಗೆ ರಸ್ತೆತಡೆ ನಡೆಸಿದರು. ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ಮೆಹಬೂಬಾ ಮುಫ್ತಿ, ತಮ್ಮ ಮೊಬೈಲ್ ಸಂಖ್ಯೆಯಿಂದ ಹೊರಹೋಗುವ ಕರೆಗಳನ್ನು ಯಾವುದೇ ವಿವರಣೆ ನೀಡದೆ ಅಮಾನತುಗೊಳಿಸಲಾಗಿದೆ ಎಂದೂ ತಿಳಿಸಿದರು.
1. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ
2. ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ
3. ರಾಜ್ಯಸಭಾ ಸಂಸದ ಕಪಿಲ್ ಸಿಬಲ್
4. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ
5. ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್
6. ಜಾರ್ಖಂಡ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್
7. ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್
8. ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ
9. ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಸುವೇಂದು ಅಧಿಕಾರಿ
10.ಜಮ್ಮು-ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವಿಂದರ್ ರೈನಾ
11. ಸಿಪಿಎಂ ನಾಯಕಿ ಬೃಂದಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ
12 ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್
13. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ