

ಬೆಂಗಳೂರು: 7 ವರ್ಷದ ಬಳಿಕ ಆಂತರಿಕ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಪಥಮ ಪ್ರಕರಣ ದಾಖಲಾಗಿದೆ.
ಆಂತರಿಕ ಭದ್ರತಾ ಪೊಲೀಸ್ ಪಡೆ ರಾಜ್ಯದಲ್ಲೇ ಒಂದು ವಿಶೇಷ ದಳ. ಈ ಠಾಣೆ 2013ರಲ್ಲಿ ಪ್ರಾರಂಭವಾಗಿದ್ದರೂ ಇದುವರೆಗೆ ಯಾವೊಂದು ಕೇಸ್ ದಾಖಲಾಗಿರಲಿಲ್ಲ. ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಆಂತರಿಕ ಭದ್ರತಾ ಪಡೆಯ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಂತೆ ಇದೀಗ ಮೊದಲ ಕೇಸ್ ದಾಖಲಾಗಿದೆ.
ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಆ.5ರಂದು ಆಂತರಿಕ ಭದ್ರತಾ ಪೊಲೀಸ್ ಠಾಣೆಯಲ್ಲಿ ಮೊದಲ ಕೇಸ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ದಾಖಲಾಗುವ ಮೂಲಕ ಆಂತರಿಕ ಭದ್ರತಾ ಪೊಲೀಸ್ ಠಾಣೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಮೊದಲ ಪ್ರಕರಣದ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.