

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡ ನಿಯಂತ್ರಣ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಅಗ್ನಿಶಾಮಕ ದಳದ ಠಾಣಾಧಿಕಾರಿ ನರೇಂದ್ರ ಅವರು ಅಗ್ನಿ ಅವಘಡ ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು.
ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿವರಿಸಿದರು. ಅಡುಗೆ ಅನಿಲದ ಸ್ಟೌ ಮತ್ತು ಸಿಲಿಂಡರ್‌ಗೆ ಕನಿಷ್ಠ 5 ಅಡಿ ಅಂತರವಿರಬೇಕು. ಒಂದು ವೇಳೆ ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್‌ಗಳನ್ನು ನೀಡಿದಲ್ಲಿ ಅದನ್ನು ಹಿಂದಿರುಗಿಸಬೇಕು ಎಂದು ತಿಳಿಸಿದರು.
ಶಾಲಾ ಕಾಲೇಜುಗಳು, ಸಿನಿಮಾ ಮಂದಿರಗಳು, ಹಾಸ್ಟೆಲ್ ಮತ್ತಿತರ ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಸಿದರು. ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿ ಇದ್ದಾರೆ. ನೀರು ಮತ್ತು ಅಗ್ನಿ ಅವಘಡಗಳು ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ದಳದಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ ಎಂದರು.
ಪ್ರಾಚಾರ್ಯ ಎಚ್.ಜಯಂತ್, ಕಾಲೇಜು ಅಭಿವೃದ್ಧಿ ಸಮಿತಿಯ ಚನ್ನವೀರಪ್ಪ ಗಾಮನಗಟ್ಟಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.