ಕರೊನಾ ಲಸಿಕೆ ಉತ್ಪಾದನಾ ಕೇಂದ್ರಕ್ಕೇ ಬೆಂಕಿ! ಪುಣೆಯ ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ಬೆಂಕಿ ಅವಘಡ

fire
Published on

ಪುಣೆ: ಕರೊನಾ ಸೋಂಕಿನ ವಿರುದ್ಧ ಹೋರಾಡಲು ತಿಂಗಳುಗಳ ಪರಿಶ್ರಮದಿಂದ ಲಸಿಕೆ ಕಂಡುಹಿಡಿದು, ಇದೀಗ ಉತ್ಪಾದನೆ ನಡೆಸುತ್ತಿರುವ ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪುಣೆಯ ಮಂಜಿರಾ ಪ್ರದೇಶದಲ್ಲಿರುವ ಇನ್‌ಸ್ಟಿಟ್ಯೂಟ್​ನ ಟರ್ಮಿನಲ್ ಗೇಟ್-1 ಒಳಗಿನ SEZ-3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿಸಲಾಗಿದೆ.

ಅಗ್ನಿಶಾಮಕ ದಳದ 10 ವಾಹನಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಅದರ ಜತೆಯಲ್ಲಿ ಎನ್​ಡಿಆರ್​ಎಫ್​ ತಂಡವೂ ಸ್ಥಳದಲ್ಲಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಕಟ್ಟಡದ ಒಳಗೆ ನಾಲ್ವರಿದ್ದು ಅದರಲ್ಲಿ ಮೂವರನ್ನು ಈಗಾಗಲೇ ರಕ್ಷಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಆಕ್ಸ್​ಫರ್ಡ್​ ಮತ್ತು ಅಸ್ತ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ತಯಾರಿಸಿರುವ ಕೋವಿಶೀಲ್ಡ್​ ಲಸಿಕೆಯನ್ನು ಸೆರಂ ಇನ್​ಸ್ಟಿಟ್ಯೂಟ್​ನಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಬೆಂಕಿ ಕಾಣಿಸಿಕೊಂಡಿರುವ ಕಟ್ಟಡ ನಿರ್ಮಾಣ ಹಂತದಲ್ಲಿದ್ದರಿಂದಾಗಿ ಅಲ್ಲಿ ಲಸಿಕೆ ಉತ್ಪಾದನೆಯಾಗಲೀ ಅಥವಾ ಶೇಖರಣೆಯನ್ನು ಮಾಡಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಲಸಿಕೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಲಾಗಿದೆ.

ಕಟ್ಟಡದ ಸುತ್ತ ಮುತ್ತ ದಟ್ಟವಾಗಿ ಹೊಗೆ ಸುತ್ತುವರಿದಿದ್ದು ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಅವಘಡದ ಕುರಿತಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪುಣೆ ನಗರ ಆಯುಕ್ತರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

ಬೆಂಕಿ ಅವಘಡದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net