

ನಂಜನಗೂಡು: ತಾಲೂಕಿನ ಕೋಣನೂರು ಕುರುಚಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದ್ದು, ವನ್ಯಜೀವಿಗಳು ಪ್ರಾಣಭಯದಲ್ಲಿ ಸಿಲುಕಿವೆ.
ಬುಧವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಅರಣ್ಯ ಪ್ರದೇಶದ ಗುಡ್ಡವೊಂದರಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಕಿ ಬಿದ್ದಿರುವ ಅರಣ್ಯ ಪ್ರದೇಶದ ಸನಿಹ ಮತ್ತೊಂದು ಗುಡ್ಡವೊಂದರಲ್ಲಿ ಬೆಂಕಿ ರೇಖೆಯನ್ನು ನಿರ್ಮಾಣ ಮಾಡುವಲ್ಲಿ ತಲ್ಲೀನರಾಗಿದ್ದ ಸಿಬ್ಬಂದಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟರಾಗಲೇ ಬೆಂಕಿಯ ಕೆನ್ನಾಲಿಗೆಗೆ ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ಯಾರೋ ಕಿಡಿಗೇಡಿಗಳು ಅರಣ್ಯ ಪ್ರದೇಶದ ಎರಡು ಕಡೆಗಳಲ್ಲಿ ಬೆಂಕಿ ಇಟ್ಟಿರುವುದಾಗಿ ಅರಣ್ಯ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿದ್ದಾರೆ.
ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲುಗಾವಲು ಮತ್ತು ಕುರುಚಲು ಗಿಡ- ಮರಗಳು ಸುಟ್ಟು ಭಸ್ಮವಾಗಿದೆ. ಉಪ ಅರಣ್ಯಾಧಿಕಾರಿ ಶಶಿಕುಮಾರ್ ನೇತೃತ್ವದ ತಂಡ ಅವಘಡ ಸಂಭವಿಸಿರುವ ಕುರಿತು ಪರಿಶೀಲನೆ ನಡೆಸಿತು. 20ಕ್ಕೂ ಹೆಚ್ಚು ಸಿಬ್ಬಂದಿ ಎರಡು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರೂ ಬೆಂಕಿಯ ಜ್ವಾಲೆ ಇನ್ನೂ ಹತೋಟಿಗೆ ಬಂದಿರಲಿಲ್ಲ. ಬೇಸಿಗೆಗೂ ಮುನ್ನವೇ ಬೆಂಕಿ ಅವಘಡ ಸಂಭವಿಸುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ವನ್ಯಜೀವಿಗಳ ಪರದಾಟ: ಅರಣ್ಯ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಧಗಧಗಿಸುತ್ತಿದ್ದಂತೆ ಪೊದೆಗಳಲ್ಲಿ ಅಡಗಿದ್ದ ಮೊಲ, ನವಿಲು, ಸಾರಂಗ ಸೇರಿದಂತೆ ವಿವಿಧ ವನ್ಯಜೀವಿಗಳು ಹಾಗೂ ಪಕ್ಷಿಗಳು ಜೀವಭಯದಲ್ಲಿ ಅತ್ತಿಂದತ್ತ ಓಡಾಡತೊಡಗಿದವು. ಕೆಲವು ಪ್ರಾಣಿಗಳು ಬೆಂಕಿಗೆ ತುತ್ತಾಗಿ ಗಾಯಗೊಂಡಿವೆ ಎನ್ನಲಾಗಿದೆ.
ಎರಡು ತಿಂಗಳಿಂದ ಕೋಣನೂರು ಗ್ರಾಮದಲ್ಲಿರುವ ಸಾವಿರಾರು ಎಕರೆ ಅರಣ್ಯ ಪ್ರದೇಶದ ಸುತ್ತಲೂ ಬೆಂಕಿ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಬೆಂಕಿ ರೇಖೆಯನ್ನು ನಿರ್ಮಿಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ.