

Plane : ಗ್ರೀಸ್‌ನ ಕಾರ್ಫುವಿನಿಂದ 8 ಸಿಬ್ಬಿಂದ ಹಾಗೂ 273 ಪ್ರಯಾಣಿಕರನ್ನು ಹೊತ್ತು ಜರ್ಮನಿಯ ಡಸೆಲ್ಡಾರ್ಫ್‌ಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 757-300 ಕಾಂಡೋರ್ ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಟಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಈ ಘಟನೆ ಶನಿವಾರ ರಾತ್ರಿ ನಡೆದಿದೆ. ವಿಮಾನದ ಬಲ ಭಾಗದ ಇಂಜಿನ್, ಟೇಕ್ ಆಫ್ ಆದ ಸುಮಾರು ಒಂದು ಗಂಟೆಯ ನಂತರ ಬೆಂಕಿ ಹೊತ್ತಿಕೊಂಡಿತು. ವಿಮಾನವನ್ನು ಇಟಲಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿ ಮರುದಿನ ಡಸೆಲ್ಡಾರ್ಫ್‌ಗೆ ಹಿಂತಿರುಗಿತು.
ವಿಮಾನವು ಆಕಾಶದಲ್ಲಿ ಹಾರಾಡುವಾಗ ಬೆಂಕಿ ಹೊತ್ತಿಕೊಂಡ 18 ಸೆಕೆಂಡುಗಳ ಭಯಾನಕ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ವಿಮಾನದ ಫ್ಯೂಸ್‌ಲೇಜ್‌ನ ಬಲಭಾಗದಿಂದ ಹಾರುವ ಬೆಂಕಿಯ ಕಿಡಿಗಳನ್ನು ಕಾಣಬಹುದು. ವಿಮಾನದ ಬಳಿ ಪಕ್ಷಿಗಳ ಹಿಂಡುಗಳನ್ನು ಸಹ ಕಾಣಬಹುದು. ಅವು ಇಂಜಿನ್‌ಗೆ ಡಿಕ್ಕಿ ಹೊಡೆದ ಕಾರಣ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಅರಿತುಕೊಂಡ ತಕ್ಷಣ ಪೈಲಟ್ ದೋಷಪೂರಿತ ಇಂಜಿನ್ ಅನ್ನು ಸ್ಥಗಿತಗೊಳಿಸಿದರು. ಒಂದೇ ಇಂಜಿನ್‌ನಲ್ಲಿ ಹಾರುತ್ತಿದ್ದ ವಿಮಾನವು ನಂತರ ಇಟಲಿಯ ಬ್ರಿಂಡಿಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗಳಲ್ಲಿ ಕೊಠಡಿಗಳು ಲಭ್ಯವಿಲ್ಲದ ಕಾರಣ ಪ್ರಯಾಣಿಕರು ರಾತ್ರಿಯಿಡೀ ವಿಮಾನದಲ್ಲೇ ಇರಬೇಕಾಯಿತು ಎಂದು ವರದಿಯಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.
ಅಟಾರಿ ಫೆರಾರಿ ಎಂಬ ಅಡ್ಡ ಹೆಸರಿನ ಬೋಯಿಂಗ್ 757 ವಿಮಾನವು ವಿಶ್ವದ ಅತ್ಯಂತ ಹಳೆಯ ವಿಮಾನ ಮಾದರಿಗಳಲ್ಲಿ ಒಂದಾಗಿದೆ. ಇದು ಸುಮಾರು 50 ವರ್ಷಗಳಿಂದ ಸೇವೆಯಲ್ಲಿದೆ. ಕಳೆದ ತಿಂಗಳು, ಅಮೆರಿಕದ ವಿಮಾನಯಾನ ಸಂಸ್ಥೆ ಡೆಲ್ಟಾ ನಿರ್ವಹಿಸುತ್ತಿದ್ದ ಲಾಸ್ ಏಂಜಲೀಸ್-ಅಟ್ಲಾಂಟಾ ವಿಮಾನವು ಎಡ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ತುರ್ತು ಭೂಸ್ಪರ್ಶ ಮಾಡಿತು. (ಏಜೆನ್ಸೀಸ್)