ಬಾಂಗ್ಲಾದೇಶದ ಗಾರ್ಮೆಂಟ್ ಕಾರ್ಖಾನೆ ಮತ್ತು ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅವಘಡ: 9 ಜನ ಬಲಿ, 8 ಮಂದಿಗೆ ಗಂಭೀರ ಗಾಯ| Fire Accident

Bangladesh
Published on

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಗಾರ್ಮೆಂಟ್ ಕಾರ್ಖಾನೆ ಮತ್ತು ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಅವಘಡ (Fire Accident)ಸಂಭವಿಸಿದ್ದು, ಕನಿಷ್ಠ 9 ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ ಎಂದು ಮಂಗಳವಾರ (ಅಕ್ಟೋಬರ್,14) ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದ ಬಗ್ಗೆ ಮಾಹಿತಿ ನೀಡಿರುವ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ತಾಜುಲ್ ಇಸ್ಲಾಂ ಚೌಧರಿ, ಗಾರ್ಮೆಂಟ್ ಕಾರ್ಖಾನೆಯ ಮೊದಲ ಮತ್ತು ಎರಡನೇ ಮಹಡಿಗಳಿಂದ ಒಂಬತ್ತು ಶವಗಳನ್ನು ಹೊರತೆಗೆಯಲಾಗಿದೆ. ಅವರೆಲ್ಲರೂ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಸಾವನ್ನಪ್ಪಿದ್ದಾರೆ ಎಂದು ನಾವು ಶಂಕಿಸುತ್ತೇವೆ ಎಂದು ತಿಳಿಸಿದ್ದಾರೆ.

ಗಾರ್ಮೆಂಟ್ ಕಾರ್ಖಾನೆಯ ಪಕ್ಕದಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ ಈ ಭೀಕರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಮಾಧ್ಯಮ ವಿಭಾಗದ ಅಧಿಕಾರಿ ತಲ್ಹಾ ಬಿನ್ ಜಾಸಿಮ್ ಹೇಳಿದ್ದಾರೆ. ಅಲ್ಲದೆ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಅಗ್ನಿಶಾಮಕ ದಳದವರು ಗಾರ್ಮೆಂಟ್ ಕಾರ್ಖಾನೆಯಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯು ರೂಪನಗರದಲ್ಲಿರುವ ಬಾಂಗ್ಲಾದೇಶ ವ್ಯವಹಾರ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (BUBT) ಮುಂಭಾಗದಲ್ಲಿ ಈ ಎರಡು ಕಟ್ಟಡಗಳು ಅಕ್ಕಪಕ್ಕದಲ್ಲಿವೆ. ದುರಂತವು ಬೆಳಿಗ್ಗೆ 11:56 ರ ಸುಮಾರಿಗೆ ಒಂಬತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಟ್ಟಡಗಳಲ್ಲಿನ ಬೆಂಕಿಯನ್ನು ನಂದಿಸಿದವು ಎಂದು ತಲ್ಹಾ ಬಿನ್ ಜಾಸಿಮ್ ಹೇಳಿದರು.

ಬಾಂಗ್ಲಾದೇಶದ ಕೈಗಾರಿಕಾ ಸ್ಪೋಟಗಳ ಇತಿಹಾಸ

2021 ರಲ್ಲಿ, ಬಾಂಗ್ಲಾದೇಶದಲ್ಲಿ ಆಹಾರ ಮತ್ತು ಪಾನೀಯ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 52 ಜನರು ಬಲಿಯಾಗಿದ್ದರು. ಫೆಬ್ರವರಿ 2019 ರಲ್ಲಿ, ಢಾಕಾದ ಅತ್ಯಂತ ಹಳೆಯ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳು, ಅಂಗಡಿಗಳು ಮತ್ತು ಗೋದಾಮುಗಳಿಂದ ಕೂಡಿದ 400 ವರ್ಷಗಳಷ್ಟು ಹಳೆಯದಾದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 67 ಜನರು ಮೃತಪಟ್ಟಿದ್ದರು.

2012 ರಲ್ಲಿ, ಢಾಕಾದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಬೀಗ ಹಾಕಿದ ನಿರ್ಗಮನ ದ್ವಾರಗಳ ಹಿಂದೆ ಸಿಲುಕಿಕೊಂಡು ಸುಮಾರು 117 ಕಾರ್ಮಿಕರು ಬಲಿಯಾಗಿದ್ದರು.

ಬಾಂಗ್ಲಾದೇಶದ ಅತ್ಯಂತ ಭೀಕರ ಕೈಗಾರಿಕಾ ದುರಂತ ಸಂಭವಿಸಿತು, ಢಾಕಾದ ಹೊರಗಿನ ರಾಣಾ ಪ್ಲಾಜಾ ಗಾರ್ಮೆಂಟ್ ಕಾರ್ಖಾನೆ ಕುಸಿದು 1,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 2010 ರಲ್ಲಿ ಹಳೆಯ ಢಾಕಾದಲ್ಲಿ ಅಕ್ರಮವಾಗಿ ರಾಸಾಯನಿಕಗಳನ್ನು ಸಂಗ್ರಹಿಸಿದ್ದ ಮನೆಯಲ್ಲಿ ಸಂಭವಿಸಿದ ಮತ್ತೊಂದು ಬೆಂಕಿಯಲ್ಲಿ ಕನಿಷ್ಠ 123 ಜನರು ಸಾವನ್ನಪ್ಪಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net