

ಬೆಂಗಳೂರು: ಕಸದ ರಾಶಿಗೆ ಬಿದ್ದ ಬೆಂಕಿ ಕೆಲವೇ ಕ್ಷಣದಲ್ಲಿ ನಾಲ್ಕು ವಾಹನಗಳಿಗೆ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.
ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿ ಶನಿವಾರ ಬೆಳಗ್ಗೆ ೧೧.೩೦ ಕ್ಕೆ ಈ ಘಟನೆ ನಡೆದಿದೆ.
ಕ್ವೀನ್ಸ್ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಕಸಕಡ್ಡಿಗಳನ್ನು ಹಾಕಲಾಗಿತ್ತು. ಆಕಸ್ಮಿಕವಾಗಿ ಆ ಕಸದ ರಾಶಿಗೆ ಬೆಂಕಿ ಬಿದ್ದಿದ್ದು ಆ ಬೆಂಕಿ ಅಲ್ಲಿಯೇ ನಿಲುಗಡೆ ಮಾಡಿದ್ದ ಎರಡು ಕೋಳಿ ಅಂಗಡಿಗೆ ಸೇರಿದ್ದ ಎರಡು ವಾಹನ ಮತ್ತು ಎರಡು ಟೋಯಿಂಗ್ ವಾಹನಕ್ಕೆ ತಗುಲಿ ಹೊತ್ತಿ ಉರಿದಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಎರಡು ವಾಹನಗಳೊಂದಿಗೆ ದೌಡಾಯಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.