

ಔರಂಗಾಬಾದ್: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಮತ್ತು ಇತರ ಇಬ್ಬರ ವಿರುದ್ಧ ವಂಚನೆ ಪ್ರಕರಣದ ಎಫ್ಐಆರ್ ದಾಖಲಾಗಿದೆ.
ಟ್ರಾವೆಲ್ ಏಜೆಂಟ್ ಒಬ್ಬರಿಗೆ 2019ರ ನವೆಂಬರ್ನಲ್ಲಿ 20.96 ಲಕ್ಷ ರೂಪಾಯಿ ವಂಚಿಸಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.
ಎಫ್ಐಆರ್ ದಾಖಲಾಗಿರುವ ವಿಚಾರವನ್ನು ತನಿಖಾಧಿಕಾರಿ ಪಿಎಸ್ಐ ಅಮರನಾಥ್ ಡಿ ನಗ್ರೆ ಖಚಿತಪಡಿಸಿದ್ದು, ಅಜರುದ್ದೀನ್ ಮತ್ತು ಇತರ ಇಬ್ಬರು ಟ್ರಾವೆಲ್ ಏಜೆಂಟ್ಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಒಂದೊಮ್ಮೆ ಅವರು ಕೋರ್ಟ್ನಲ್ಲಿ ಕೂಡಲೇ ವಂಚಿಸಿದ ಹಣವನ್ನು ಪಾವತಿಸಿದರೆ ಅವರಿಗೆ ತತ್ಕ್ಷಣವೆ ರಿಲೀಫ್ ಸಿಗಲಿದೆ. ಇಲ್ಲದೇ ಹೋದರೆ ಮೂವರನ್ನೂ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ, ಟ್ರಾವೆಲ್ ಏಜೆಂಟ್ ಆರೋಪವನ್ನು ಅಲ್ಲಗಳೆದಿರುವ ಅಜರುದ್ದೀನ್, ಔರಂಗಾಬಾದ್ನಲ್ಲಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ. ನನ್ನ ಲೀಗಲ್ ಟೀಮ್ ಅನ್ನು ಸಂಪರ್ಕಿಸಿದ್ದು ಮುಂದಿನ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
ಏನಿದು ಪ್ರಕರಣ?: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ದಾನಿಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿಯ ಮಾಲೀಕ ಶಹಾಬ್ ಮೊಹಮ್ಮದ್ ವಂಚನೆಗೊಳಗಾದ ವ್ಯಕ್ತಿ. ಈತ ನೀಡಿರುವ ದೂರಿನ ಪ್ರಕಾರ, ಅಜರುದ್ದೀನ್ ಮತ್ತು ಇತರೆ ಇಬ್ಬರು ಕಳೆದ ವರ್ಷ ನವೆಂಬರ್ನಲ್ಲಿ ಶಹಾಬ್ ಮೊಹಮ್ಮದ್ ಏಜೆನ್ಸಿ ಮೂಲಕ 20.96 ಲಕ್ಷ ರೂಪಾಯಿ ಮೌಲ್ಯದ ಹಲವು ಇಂಟರ್ ನ್ಯಾಷನಲ್ ಫ್ಲೈಟ್ ಟಿಕೆಟ್ಗಳನ್ನು ಬುಕ್ ಮಾಡಿದ್ದರು. ಇದನ್ನು ಅಜರುದ್ದೀನ್ ಅವರ ಪರ್ಸನಲ್ ಅಸಿಸ್ಟೆಂಟ್ ಮುಜೀಬ್ ಖಾನ್ ಮನವಿ ಮೇರೆಗೆ ಮಾಡಲಾಗಿತ್ತು.
ಹಣಪಾವತಿಸುವಂತೆ ಕೋರಿದಾಗ ಪ್ರತಿ ಸಲವೂ ಆನ್ಲೈನ್ ಪೇಮೆಂಟ್ನ ಭರವಸೆ ನೀಡಲಾಗಿತ್ತು. ಆದರೆ, ಯಾವುದೇ ಹಣ ವರ್ಗಾಯಿಸಿರಲಿಲ್ಲ. ಕೊನೆಗೆ ಇ-ಮೇಲ್ ಮೂಲಕ ಖಾನ್ ಅವರ ಸಹಚರ ಸುದೇಶ್ ಅವಕ್ಕಲ್ ಅವರು ಉತ್ತರಿಸಿದ್ದು, 10.6 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾಗಿ ಹೇಳಿದ್ದರು. ಆದರೆ, ಹಣ ಖಾತೆಗೆ ಜಮೆ ಆಗಿರಲಿಲ್ಲ.
ನನಗೆ ಖಾನ್ ಅವರು ಬಹಳ ವರ್ಷಗಳಿಂದ ಚಿರಪರಿಚಿತರು. ಅಜರುದ್ದೀನ್ ಅವರಿಗೆ ಫ್ಲೈಟ್ ಟಿಕೆಟ್ಗಳನ್ನು ಇಲ್ಲಿಂದಲೇ ಬುಕ್ ಮಾಡಲಾಗುತ್ತಿತ್ತು. ಈ ಸಲ ಅವರು ನವೆಂಬರ್ 9ರಂದು ಪ್ರಯಾಣಿಸಿದ್ದು ಮುಂಬೈನಿಂದ ದುಬೈ ಅಲ್ಲಿಂದ ಪ್ಯಾರಿಸ್ಗೆ ಬಳಿಕ ದೆಹಲಿ ಮೂಲಕ ಮುಂಬೈಗೆ ವಿಮಾನದ ಮೂಲಕವೇ ನವೆಂಬರ್ 12ರಂದು ವಾಪಸಾಗಿದ್ದಾರೆ. ಇದರ ಟಿಕೆಟ್ ಮೊತ್ತವೇ 20.96 ಲಕ್ಷ ರೂಪಾಯಿ ಎಂದು ದೂರಿನಲ್ಲಿ ವಿವರಿಸಿದ್ದಾರೆ. (ಏಜೆನ್ಸೀಸ್)