

ವಿಜಯಪುರ : ‘ಹಿಂದು ಹುಡುಗರು ಮುಸ್ಲಿಂ ಹುಡುಗಿಯರನ್ನು ಪ್ರೀತಿಸಿ ಮದುವೆಯಾದರೆ ಅಂತಹ ಹುಡುಗರಿಗೆ 5 ಲಕ್ಷ ರೂಪಾಯಿ ನಗದು ಪ್ರೋತ್ಸಾಹ ಧನ ಕೊಡುವ ಸರ್ಕಾರದ ಯೋಜನೆ ಮಾಡಲಾಗುವುದು’ ಎಂಬ ಹೇಳಿಕೆ ಕೊಟ್ಟ ಆರೋಪದ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ದೂರು(FIR) ದಾಖಲಾಗಿದೆ.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೈನುದ್ದೀನ್ ಮೊಹ್ಮದ್‌ಗೌಡ ಬೀಳಗಿ ಎಂಬುವವರು ಗಾಂಧಿ ಚೌಕ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಒಂದು ಸಮುದಾಯಕ್ಕೆ ಘಾಸಿ ಮಾಡಿರುವ ಮತ್ತು ಇನ್ನೊಂದು ಧರ್ಮಕ್ಕೆ ಪ್ರಚೋದನೆ ನೀಡಿ ರಾಜ್ಯಾದ್ಯಂತ ಎರಡು ಕೋಮಿನ ನಡುವೆ ಕೋಮು ಸಂಘರ್ಷವನ್ನುಂಟು ಮಾಡುವ ಸಂಭವ ಇರುವ ಹೇಳಿಕೆ ನೀಡಿದ ಯತ್ನಾಳ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ ಎಂಬ ವ್ಯಕ್ತಿಯ ಕೊಲೆಯಾದ ಹಿನ್ನೆಲೆ, ಆ. 11ರಂದು ಸಾಂತ್ವನ ಹೇಳಲು ಹೋದ ಸಂದರ್ಭ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಯತ್ನಾಳ್ ಹಲವು ವರ್ಷಗಳಿಂದ ಬೇರೆ ಬೇರೆ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಾ ಸಾರ್ವಜನಿಕರಲ್ಲಿ ಕೋಮು ದ್ವೇಷ ಹುಟ್ಟಿಸುತ್ತಾ ಬಂದಿದ್ದಾರೆ. ಆ ಮೂಲಕ ಸಾರ್ವಜನಿಕರ ಶಾಂತಿ ಮತ್ತು ಸೌಹರ್ದತೆ ಕದಡುವಂತೆ ಮಾಡಿದ್ದಾರೆ. ಈ ಹಿನ್ನೆಲೆ ಶಾಸಕ ಯತ್ನಾಳ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.