

ಮಂಡ್ಯ: ಜಾಯಿಂಟ್ ವ್ಹೀಲ್ನಲ್ಲಿ ಕೂದಲು ಸಿಲುಕಿ, ಬಾಲಕಿಯ ತಲೆಯ ಚರ್ಮವೇ ಕಿತ್ತು ಬಂದ ಪ್ರಕರಣ ಸಂಬಂಧಿಸಿದಂತೆ ಇದೀಗ ಜಾಯಿಂಟ್ ವ್ಹೀಲ್ನ ಮಾಲೀಕ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಇದೀಗ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತ ಬಾಲಕಿ ಶ್ರೀವಿದ್ಯಾಳ ಸಂಬಂಧಿ ಪೂಜಾ ಎಂಬುವವರು ಕೊಟ್ಟ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜಾಯಿಂಟ್ ವ್ಹೀಲ್ ಆಟಿಕೆಯ ಮಾಲೀಕ ರಮೇಶ್, ಶ್ರೀರಂಗನಾಥಸ್ವಾಮಿ ದೇಗುಲದ ಮುಖ್ಯ ಕಾರ್ಯ ನಿರ್ವಾಹಕ ತಮ್ಮೇಗೌಡ, ಪುರಸಭೆ ಮುಖ್ಯಾಧಿಕಾರಿ ಸಂದೀಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂಜಾಗ್ರತ ಕ್ರಮ ಕೈಗೊಂಡು ಅನುಮತಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 337ರ ಅಡಿ ಪ್ರಕರಣ ದಾಖಲಾಗಿದೆ.
ಶ್ರೀರಂಗನಾಥ ದೇಗುಲದ ಆವರಣದಲ್ಲಿ ಕಳೆದ ಶನಿವಾರ ರಾತ್ರಿ ಭೀಕರ ಘಟನೆ ನಡೆದಿತ್ತು. ಸದ್ಯ ಬೆಂಗಳೂರು ಮೂಲದ ಬಾಲಕಿ ಶ್ರೀವಿದ್ಯಾ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆಯ ವಿವರ:
ರಥಸಪ್ತಮಿ ಅಂಗವಾಗಿ ರಂಗನಾಥಸ್ವಾಮಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣಕ್ಕೆ ಕುಟುಂಬ ಸಮೇತ ತೆರಳಿದ್ದರು. ದೇವರ ದರ್ಶನದ ಬಳಿಕ ಬಾಲಕಿ ಜಾಯಿಂಟ್ ವ್ಹೀಲ್ ಆಡಲು ತೆರಳಿದ್ದಾಳೆ. ಮೈದಾನದಲ್ಲಿದ್ದ ಜಾಯಿಂಟ್ ವ್ಹೀಲ್ನಲ್ಲಿ ಬಾಲಕಿ ಶ್ರೀವಿದ್ಯಾ ಕುಳಿತುಕೊಂಡಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಬಾಲಕಿ ತಲೆಕೂದಲು ಜಾಯಿಂಟ್ ವ್ಹೀಲ್‌ಗೆ ಸಿಕ್ಕಿ ಹಾಕಿಕೊಂಡಿದೆ. ಬಾಲಕಿ ತಲೆಕೂದಲು ವ್ಹೀಲ್‌ಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಂತೆ ಪಕ್ಕದಲ್ಲಿ ಕುಳಿತುಕೊಂಡಿದ್ದ ಪೋಷಕರು ಕೂದಲನ್ನು ಬಿಡಿಸಿಕೊಳ್ಳಲು ಜೋರಾಗಿ ಎಳೆದಿದ್ದಾರೆ. ಆದರೆ, ಜಾಯಿಂಟ್ ವ್ಹೀಲ್ ಜೋರಾಗಿ ತಿರುಗುವಾಗ ಬಾಲಕಿಯ ತಲೆಯ ಕೂದಲು ಇಡಿ ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದಿದೆ.