

ನವದೆಹಲಿ: ಭಾರತದ ಕಾನೂನುಪಾಲನೆ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ಹೊಂದಿರುವ ಟ್ವಿಟರ್ ಸಂಸ್ಥೆ ಇದೀಗ ತಾನೇ ಎಡವಟ್ಟು ಮಾಡಿಕೊಳ್ಳುವ ಜತೆಗೆ ಅದರ ವಿರುದ್ಧ ಕೇಸ್ ಮೇಲೆ ಕೇಸು ದಾಖಲಾಗಲಾರಂಭಿಸಿದೆ.
ಭಾರತದ ಹೊಸ ಐಟಿ ಕಾಯ್ದೆ ಪ್ರಕಾರ ಎಲ್ಲ ಸೋಷಿಯಲ್ ಮೀಡಿಯಾ ಕಂಪನಿಗಳು ಭಾರತದಲ್ಲಿ ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ಕೇಂದ್ರ ಸರ್ಕಾರ ಗಡುವು ವಿಧಿಸಿತ್ತು. ಈ ಬಗ್ಗೆ ಹಿಂದೇಟು ಹಾಕುತ್ತಲೇ ಇದ್ದ ಟ್ವಿಟರ್, ಕೊನೆಗೆ ಧರ್ಮೇಂದ್ರ ಚತುರ್ ಅವರನ್ನು ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿದ್ದರೂ ಅವರು ಮೊನ್ನೆಮೊನ್ನೆಯಷ್ಟೇ ರಾಜೀನಾಮೆ ಕೊಟ್ಟರು. ಪರಿಣಾಮವಾಗಿ, ಟ್ವಿಟರ್ ಮತ್ತೆ ಭಾರತದ ಕಾನೂನನ್ನು ಪಾಲಿಸದಂತಾಗಿದೆ.
ಇನ್ನೊಂದೆಡೆ ಇದಕ್ಕೂ ಮುನ್ನ ಕೇಂದ್ರ ಐಟಿ ಸಚಿವರ ಟ್ವಿಟರ್ ಹ್ಯಾಂಡಲ್ಅನ್ನು ಕೆಲಕಾಲ ಬ್ಲಾಕ್ ಮಾಡಿ, ಅನ್ಬ್ಲಾಕ್ ಮಾಡಿದ್ದ ಟ್ವಿಟರ್, ನಿನ್ನೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದ ವಿಶ್ವ ಭೂಪಟದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಭಾರತದ ಹೊರಗಿರುವಂತೆ ಚಿತ್ರಿಸಿತ್ತು. ಈ ಹಿನ್ನೆಲೆಯಲ್ಲಿ ಟ್ವಿಟರ್ ಎಂಡಿ ಸೇರಿ ಟ್ವಿಟರ್ನ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ. ಮಾತ್ರವಲ್ಲದೆ ಉತ್ತರಪ್ರದೇಶದಲ್ಲಿನ ಘಟನೆಯೊಂದರ ಕುರಿತ ಟ್ವೀಟ್ ಹಿನ್ನೆಲೆಯಲ್ಲೂ ಟ್ವಿಟರ್ ಇಂಡಿಯಾ ಎಂಡಿ ವಿರುದ್ಧ ಕೇಸ್ ದಾಖಲಾಗಿದೆ.
ಇದೀಗ ಟ್ವಿಟರ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿರುವ ಪ್ರಕರಣ ಬಹಿರಂಗಗೊಂಡಿದೆ. ಮಕ್ಕಳನ್ನು ಅಶ್ಲೀಲವಾಗಿ ತೋರಿಸಿರುವ ಟ್ವೀಟ್ ಒಂದು ಪೋಸ್ಟ್ ಆಗಿರುವ ಹಿನ್ನೆಲೆಯಲ್ಲಿ ದೆಹಲಿ ಸೈಬರ್ ಸೆಲ್ ಪೊಲೀಸರು ಟ್ವಿಟರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ನೀಡಿದ ದೂರಿನ ಮೇರೆಗೆ ಪೊಲೀಸರು ಟ್ವಿಟರ್ ವಿರುದ್ಧ ಪೋಸ್ಕೋ ಕೇಸ್ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಭಾರತದ ಕಾನೂನುಪಾಲಿಸಲು ಹಿಂದೇಟು ಹಾಕುತ್ತಿರುವ ಟ್ಟಿಟರ್ ವಿರುದ್ಧ ಮೇಲಿಂದ ಮೇಲೆ ಬೀಳುತ್ತಿರುವ ಕೇಸುಗಳು ಅದಕ್ಕೆ ಹಿನ್ನಡೆ ಉಂಟು ಮಾಡುತ್ತಿರುವಂತೆ ಕಾಣಿಸುತ್ತಿವೆ. (ಏಜೆನ್ಸೀಸ್)