

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಐಟಿ ನಿಯಮದ ಪ್ರಕಾರ ಟ್ವಿಟರ್, ಓರ್ವ ಪತ್ರಕರ್ತ ಸಹಿತ ಹಲವರ ವಿರುದ್ಧ ಕೇಸ್ ದಾಖಲಾಗಿದೆ. ಮುಸ್ಲಿಂ ಸಮುದಾಯದ ವಯೋವೃದ್ಧನ ಮೇಲೆ ನಡೆದ ಹಲ್ಲೆ ದೃಶ್ಯವನ್ನು ಇವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
ಗಾಜಿಯಾಬಾದ್ನಲ್ಲಿ ಜೂನ್ 5ರಂದು ಆಮ್ಲೆಟ್ ವ್ಯಾಪಾರಿ ಅಬ್ದುಲ್ ಸಮದ್ ಮೇಲೆ ದಾಳಿ ನಡೆಸಿ, ಸಮೀಪದ ಕಾಡು ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರ ಗಡ್ಡ ಕಟ್ ಮಾಡಿ ವಂದೇ ಮಾತರಂ, ಜೈಶ್ರೀರಾಮ್ ಘೋಷಣೆ ಕೂಗಿದರೆಂದು ಆರೋಪಿಸಿದ ವಿಡಿಯೋವನ್ನು ರಾಣಾ ಅಯ್ಯುಬ್, ಸಬಾ ನಖ್ವಿ, ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ್ದರು. ದ ವೈರ್ ಎಂಬ ಆನ್ಲೈನ್ ನ್ಯೂಸ್ ಪೋರ್ಟಲ್ ಕೂಡ ಸುದ್ದಿ ಪ್ರಕಟಿಸಿ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮ್ಮದ್, ಮಕ್ಸೂರ್ ಉಸ್ಮಾನಿ ಕೂಡ ಟ್ವೀಟ್ ಮಾಡಿ "ಹಿಂದುಗಳಿಂದ ಆಕ್ರಮಣ' ಎಂದು ಟೀಕಿಸಿದ್ದರು. ಈ ನಡುವೆ, ಸಮದ್ ಕುಟುಂಬದವರು ಪ್ರತಿಕ್ರಿಯೆ ನೀಡಿದ್ದು, ಸಮದ್ ಆಮ್ಲೆಟ್ ಮಾರಾಟ ಮಾಡುತ್ತಿಲ್ಲ. ಅವರು ಬಡಗಿ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿ ಪ್ರಕಟಿಸಿರುವುದಕ್ಕಾಗಿ ಟ್ವಿಟರ್ ಮತ್ತು ಟ್ವೀಟ್ ಮಾಡಿದವರ ವಿರುದ್ಧ ಗಾಜಿಯಾಬಾದ್ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ.
ಐಟಿ ಕಾಯ್ದೆಯ ಸೆಕ್ಷನ್ 79
ಮಾಹಿತಿ ತಂತ್ರಜ್ಞಾನ ಕಾಯ್ದೆ 2020ರ ಸೆಕ್ಷನ್ 79ರ ಪ್ರಕಾರ, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಳಕೆದಾರರು ಪ್ರಕಟಿಸುವ ಮಾಹಿತಿ, ಡೇಟಾ ಅಥವಾ ಸಂವಹನ ಕೊಂಡಿಗಳಿಗೆ ಆಯಾ ತಾಣಗಳು ಬಾಧ್ಯಸ್ಥವಾಗಿರುವುದಿಲ್ಲ. ಈ ಮಾಹಿತಿ, ಡೇಟಾ, ಕೊಂಡಿಗಳಿಂದ ಆಯಾ ತಾಣಗಳಿಗೆ "ಇಂಟರ್ ಮೀಡಿಯರಿ' ಎಂಬ ವಿನಾಯಿತಿ ಸಿಗುತ್ತದೆ.
ತಪ್ಪಿದ ಕಾನೂನು ರಕ್ಷಣೆ
ಕೇಂದ್ರ ಸರ್ಕಾರ ತಂದಿರುವ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳನ್ನು ಪಾಲಿಸಲು ವಿಳಂಬ ಮಾಡಿದ ಟ್ವಿಟರ್, ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಅಮೆರಿಕ ಮೂಲದ ಮೊದಲ ಸೋಷಿಯಲ್ ಮೀಡಿಯಾ ವೇದಿಕೆ ಎಂದೆನಿಸಿಕೊಂಡಿದೆ. ಹೊಸ ನಿಯಮಗಳ ಬಗ್ಗೆ ಭಿನ್ನಮತ ತೋರಿದ ಟ್ವಿಟರ್, ಅನುಷ್ಠಾನ ವಿಳಂಬ ಮಾಡುತ್ತ ಬಂದಿದೆ. ಆದಾಗ್ಯೂ, ಹೊಸ ನಿಯಮ ಪಾಲಿಸಲು ಗರಿಷ್ಠ ಪ್ರಯತ್ನ ಮಾಡುವುದಾಗಿ ಹೇಳುತ್ತಲೇ ಇದೆ.
ಟ್ವಿಟರ್ ಮೇಲೆ ಏನು ಪರಿಣಾಮ
ಭಾರತದ ನೆಲದಲ್ಲಿ ಟ್ವಿಟರ್ ಈಗ "ಇಂಟರ್ಮೀಡಿಯರಿ' ಅಲ್ಲ. ಅದರಲ್ಲಿ ಪ್ರಕಟವಾಗುವ ಮಾಹಿತಿ, ಡೇಟಾ ಮತ್ತು ಲಿಂಕ್ಗಳು ಸೇರಿ ಪ್ರತಿಯೊಂದು ಕಂಟೆಂಟ್ಗೂ ಟ್ವಿಟರ್ ಕೂಡ ನೇರ ಹೊಣೆಗಾರನಾಗಿರುತ್ತದೆ. ಟ್ವಿಟರ್ ಬಳಕೆದಾರರು ಐಟಿ ನಿಯಮ ಉಲ್ಲಂಘಿಸಿದರೆ ಟ್ವಿಟರ್ನ ಉದ್ಯೋಗಿಗಳು ಕೂಡ ಅವರೊಂದಿಗೆ ಆರೋಪಿಗಳಾಗಿ ಬಿಡುತ್ತಾರೆ. ಅವರಿಗೆ "ಇಂಟರ್ಮೀಡಿಯರಿ' ಎಂಬ ಲೀಗಲ್ ಕವರ್ ಸಿಗುವುದಿಲ್ಲ. ಇದು ಬಿಟ್ಟರೆ, ಟ್ವಿಟರ್ ಅಥವಾ ಟ್ವಿಟರ್ ಬಳಕೆದಾರರಿಗೆ ಇದರಿಂದ ಬೇರೇನೂ ಪರಿಣಾಮವಾಗುವುದಿಲ್ಲ.
ಲೀಗಲ್ ಕವರ್ ಎಂದರೆ..
ಸಾಮಾಜಿಕ ಜಾಲತಾಣಗಳಿಗೆ ಐಟಿ ಕಾಯ್ದೆಯ ಸೆಕ್ಷನ್ 79ರ ಪ್ರಕಾರ "ಥರ್ಡ್ ಪಾರ್ಟಿ' ಅಥವಾ "ಇಂಟರ್ಮೀಡಿಯರಿ' ಎಂಬ ಮಾನ್ಯತೆ ಸಿಗಬೇಕಾದರೆ, ಕಾನೂನಿನಿಂದ ರಕ್ಷಣೆಗೆ ಸಿಗಬೇಕಾದರೆ ಹೊಸ "ಇಂಟರ್ಮೀಡಿಯರಿ' ಮಾರ್ಗಸೂಚಿಯನ್ನು ಅವು ಪಾಲಿಸಬೇಕು. ಟ್ವಿಟರ್ ತನ್ನದೇ ಅಂತಾರಾಷ್ಟ್ರೀಯ ನಿಯಮದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಪ್ರತಿಪಾದಿಸುತ್ತಿದೆ. "ಇಂಟರ್ಮೀಡಿಯರಿ' ಮಾರ್ಗಸೂಚಿ ಪಾಲಿಸದ ಟ್ವಿಟರ್ ವೇದಿಕೆಯಲ್ಲಿ ಪ್ರಕಟವಾಗುವ ಪ್ರತಿಯೊಂದು ಕಂಟೆಂಟ್ಗೂ ಅದರ ಬಳಕೆದಾರರಷ್ಟೇ ಅಲ್ಲ, ಅದು ಕೂಡ ನೇರ ಹೊಣೆಗಾರಿಕೆ ವಹಿಸಬೇಕಾಗುತ್ತದೆ.
ಕಾರಣವೇನು?
ದೇಶದಲ್ಲಿ ಮಾರ್ಚ್ 25ರಂದು ಪರಿಚಯಿಸಲಾದ ಇಂಟರ್ಮೀಡಿಯರಿ ಮಾರ್ಗಸೂಚಿ ಮೇ 26ರಿಂದ ಜಾರಿಗೆ ಬಂದಿದೆ. ಸಾಕಷ್ಟು ಕಾಲಾವಕಾಶ ನೀಡಿದರೂ ಟ್ವಿಟರ್ "ಉದ್ದೇಶಪೂರ್ವಕ'ವಾಗಿ ಮಾರ್ಗಸೂಚಿ ಪಾಲಿಸಿಲ್ಲ. ಟ್ವಿಟರ್ನಲ್ಲಿರುವ ಕಂಟೆಂಟ್ ಅನ್ನು "ಯಾವಾಗ ಸೂಕ್ತವೋ ಆಗ' ತಡೆಯುವ ಮಾರ್ಗವನ್ನು ಸರ್ಕಾರ ಅನುಸರಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.