ರೆಸ್ಟೊರೆಂಟ್​ ಬಾಗಿಲು ಮುಚ್ಚಿಸಿದ ಪೊಲೀಸರ ವಿರುದ್ಧ ಮಾಲೀಕನ ಸೇಡು; ಎಫ್​ಐಆರ್​ ದಾಖಲು

Police 19 Jul 20
Published on

ಥಾಣೆ: ಪೊಲೀಸ್ ಅಧಿಕಾರಿಯೊಂದಿಗೆ ಚೆಲ್ಲಾಟವಾಡಿದ ರೆಸ್ಟೋರೆಂಟ್ ಮಾಲೀಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮಹಾರಾಷ್ಟ್ರದ ಥಾಣೆಯಲ್ಲಿರುವ ಈ ರೆಸ್ಟೊರೆಂಟ್​ನಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆಯಾದ ಕಾರಣಕ್ಕೆ ಪೊಲೀಸರು ಅದನ್ನು ಸೀಲ್​ಡೌನ್​ ಮಾಡಿದ್ದರು. ರೆಸ್ಟೋರೆಂಟ್​ ಬಾಗಿಲನ್ನು ಮುಚ್ಚಿಸಿದ್ದರು. ಅದೇ ಸಿಟ್ಟಿನಲ್ಲಿದ್ದ ಮಾಲೀಕ, ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ, ಸಿಕ್ಕಿಬಿದ್ದಿದ್ದಾನೆ.

ಮಾಲೀಕನ ಹೆಸರು ದೀಪಕ್​ ದಂಶನಿ. ತನ್ನ ರೆಸ್ಟೊರೆಂಟ್​ನ್ನು ಪೊಲೀಸರು ಮುಚ್ಚುತ್ತಿದ್ದಂತೆ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಡಿಜಿ ಕಂಟ್ರೋಲ್​ ಮತ್ತು ಥಾಣೆ ಸಿಟಿ ಪೊಲೀಸ್​ ಠಾಣೆಯ ಟ್ವಿಟರ್ ಖಾತೆಯನ್ನು ಟ್ಯಾಗ್​ ಮಾಡಿ, ಥಾಣೆ ಕಮಿಷನರೇಟ್​ ವ್ಯಾಪ್ತಿಯ ಪೊಲೀಸ್ ಅಧಿಕಾರಿಯೋರ್ವ ಒಂದು ರೆಸ್ಟೋರೆಂಟ್​ನಲ್ಲಿ ರಾತ್ರಿ 11.30ರವರೆಗೂ ಕುಳಿತು ಮದ್ಯಪಾನ ಮಾಡುತ್ತಿದ್ದರು ಎಂದು ಟ್ವೀಟ್​ ಮಾಡಿದ್ದ. ಇದನ್ನೂ ಓದಿ: 15 ಸಾವಿರ ರೂ. ಪಡೆದು ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆದ ವೈದ್ಯ

ಈ ಮೆಸೇಜ್​​ನ್ನು ಡಿಜಿ ಕಂಟ್ರೋಲ್​ ರೂಂ ಥಾಣೆ ನಗರ ಪೊಲೀಸ್​ ಠಾಣೆಗೆ ಫಾರ್ವರ್ಡ್ ಮಾಡಿ, ಸ್ಪಷ್ಟನೆ ಕೇಳಿತ್ತು. ಆ ಮೆಸೇಜ್​ ನೋಡಿದ ಪೊಲೀಸ್ ಅಧಿಕಾರಿ ಶಾಕ್​ಗೆ ಒಳಗಾಗಿದ್ದರು. ಕಾರಣ ದೂರಿನಲ್ಲಿ ಅವರದ್ದೇ ಹೆಸರಿತ್ತು. ನಂತರ, ನಾನು ಹೀಗೆ ರೆಸ್ಟೋರೆಂಟ್​ನಲ್ಲಿ ಯಾವತ್ತು ಕುಡಿದಿಲ್ಲ. ಈ ಟ್ವಿಟರ್​ನಲ್ಲಿ ನಮೂದಿಸಲಾದ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದೆ ಎಂಬುದಕ್ಕೆ ಸಾಕ್ಷಿ ಇದೆ ಎಂದು ಹೇಳಿ, ಸಂಬಂಧಪಟ್ಟ ದಾಖಲೆಗಳೊಂದಿಗೆ ಅವರು ಸ್ಪಷ್ಟನೆ ನೀಡಿದ್ದರು.

ನಂತರ ಇದು ಟ್ವೀಟ್​ ಮಾಡಿದವನ ಕಿತಾಪತಿ ಎಂದು ಅರ್ಥ ಮಾಡಿಕೊಂಡ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಆದರೆ ಇದುವರೆಗೂ ಆತನನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net