ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ವಿರುದ್ಧ ಪ್ರಕರಣ ದಾಖಲು! ಕಾರಣ ಹೀಗಿದೆ

ವಿಜಯವಾಣಿ - 2024-01-19T111725.518
Published on

ಅಸ್ಸಾಂ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮಾರ್ಗದಲ್ಲಿ ಬದಲಾವಣೆ ಕಂಡುಬಂದ ಹಿನ್ನಲೆ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಾರ್ಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಸ್​ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಹಾಗೂ ಅದರ ಆಯೋಜಕರಾದ ಕೆ.ಬಿ. ಬೈಜು ವಿರುದ್ಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಮಧ್ಯಾಹ್ನ ಯಾತ್ರೆ ಜೋರ್ಹತ್ ಪಟ್ಟಣದ ಮೂಲಕ ಹಾದು ಹೋಗುತ್ತಿದ್ದಂತೆ ರ್ಯಾಲಿ ಸಂಘಟಕರು ಈ ಹಿಂದೆ ತಿಳಿಸಿದ್ದ ಮಾರ್ಗದಲ್ಲಿ ಸಾಗದೆ ಹಾದಿಯನ್ನು ಬದಲಿಸಿರುವುದು ಅಕ್ಷಮ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಪಟ್ಟಿಯಲ್ಲಿ ಉಲ್ಲೇಖಿಸಿದ್ದ ಮಾರ್ಗದಲ್ಲಿ ಹಠಾತ್ ಬದಲಾವಣೆಯು ಈ ಎಫ್​ಐಆರ್​ಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದು, ಕೆ.ಬಿ. ಬೈಜಿ ಮತ್ತು ಇತರ ಸಂಘಟಕರು ಟ್ರಾಫಿಕ್ ಬ್ಯಾರಿಕೇಡ್‌ಗಳನ್ನು ಬ್ರೇಕ್​ ಮಾಡುವಂತೆ ಜನರನ್ನು ಪ್ರಚೋದಿಸಿದರು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾದರು ಎಂದು ಹೇಳಿದ್ದಾರೆ.

ಯಾತ್ರೆಯ ಮುಖ್ಯ ಆಯೋಜಕರ ವಿರುದ್ಧ ಜೋರ್ಹತ್ ಸದರ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ವರದಿಯ ಪ್ರಕಾರ, ಯಾತ್ರೆಯು ಜಿಲ್ಲಾಡಳಿತದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ. ಇದರಿಂದ ರಸ್ತೆ ಸುರಕ್ಷತಾ ನಿಯಮಗಳು ಉಲ್ಲಂಘವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net