ಪುನೀತ್ ಕೆರೆಹಳ್ಳಿ ಸೇರಿ ಐವರ ವಿರುದ್ಧ ಎಫ್‌ಐಆರ್: ಮಾಲ್ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಆರೋಪ

Crime Logo
Published on

ಬೆಂಗಳೂರು: ಕ್ರಿಸ್ಮಸ್ ಟ್ರೀ ಪ್ರದರ್ಶನ ಹಾಗೂ ಅದಕ್ಕೆ ಟಿಕೆಟ್ ನಿಗದಿಪಡಿಸಿರುವುದನ್ನು ವಿರೋಧಿಸಿ ಮಾಲ್ ಸಿಬ್ಬಂದಿಗೆ ತೊಂದರೆ ಹಾಗೂ ಬೆದರಿಕೆ ಹಾಕಿರುವ ಆರೋಪದಡಿ ಪುನೀತ್ ಕೆರೆಹಳ್ಳಿ ಮತ್ತು ಅವರ ಬೆಂಬಲಿಗರ ವಿರುದ್ದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾದ ಸೆಕ್ಯುರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಡಿ.೨೩ರ ಮಧ್ಯಾಹ್ನ ೧.೩೦ ರ ಸುಮಾರಿಗೆ ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾ ಬಳಿ ತೆರಳಿದ್ದ ಪುನೀತ್ ಕೆರೆಹಳ್ಳಿ ಮತ್ತವರ ಬೆಂಬಲಿಗರು, ಮಾಲ್ ಒಳಗೆ ಕ್ರಿಸ್ಮಸ್ ಟ್ರೀ ಪ್ರದರ್ಶನ ಹಾಗೂ ಅದಕ್ಕೆ ೨೦೦ ರೂ. ಟಿಕೆಟ್ ನಿಗದಿಪಡಿಸಿರುವುದನ್ನ ವಿರೋಧಿಸಿದ್ದಾರೆ. ಹಿಂದೂಗಳ ಹಬ್ಬಗಳಿಗೆ ಯಾಕೆ ರೀತಿ ಅಲಂಕಾರ ಮಾಡುವುದಿಲ್ಲ? ಜನವರಿ ೨೨ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಿದ್ದು, ಆ ದಿನ ಇದೇ ರೀತಿ ಅಲಂಕಾರ ಮಾಡಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಮಾಲ್‌ನ್ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ಬಳಿ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಡಿ. ೨೫ ಹಾಗೂ ೩೧ರಂದು ಮತ್ತೆ ಬಂದು ಗಲಾಟೆ ಮಾಡುವುದಾಗಿ ತಿಳಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net